Nitish Kumar | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಸಂಸದ ಮನೋಜ್ ಝಾ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಭಾವುಕ ಟ್ವೀಟ್ ಮತ್ತು ರಾಜ್ಯಸಭೆ ಪ್ರವೇಶದ ನಿರ್ಧಾರ ಹೊರಬಿದ್ದ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿರುವ ವಿಪಕ್ಷ ಆರ್‌ಜೆಡಿ ನಾಯಕರು, ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿಯ ಶಿಂಧೆ ಆಪರೇಷನ್ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಿಟಿಐ ಜೊತೆ ಮಾತನಾಡಿರುವ ಆರ್‌ಜೆಡಿ ಸಂಸದ ಮನೋಜ್ ಝಾ, ನಿತೀಶ್ ಕುಮಾರ್ ಅವರ ಟ್ವೀಟ್ ಓದಿದ ಬಳಿಕ ನನಗೆ ಅನಿಸಿದ್ದು, ಆ ಸಾಲುಗಳನ್ನು ಅವರು ಬರೆದಿಲ್ಲ ಮತ್ತು ಬರೆಯುವಂತೆ ನಿರ್ದೇಶಿಸಿಲ್ಲ. ಈ ಸಂದೇಶವು ನೇರವಾಗಿ ದೆಹಲಿಯಿಂದ (ಬಿಜೆಪಿ ಹೈಕಮಾಂಡ್) ಬಂದಿದೆ, ಇದರಿಂದ ಜೆಡಿಯುನ ಮೂಲ ಅಸ್ತಿತ್ವಕ್ಕೇ ಧಕ್ಕೆಯಾಗಿದೆ ಎಂದು ಜಾ ಟೀಕಿಸಿದ್ದಾರೆ.
ತೇಜಸ್ವಿ ಯಾದವ್ ಹೇಳಿದ್ದು ನಿಜವಾಯ್ತು
ಬಿಹಾರದ ರಾಜಕೀಯದಲ್ಲಿ ನಿನ್ನೆಯಿಂದ ಒಂದು ದೊಡ್ಡ ಕ್ರಾಂತಿ ಹಠಾತ್ನೆ ಗೋಚರವಾಗಿದ್ದು, ನಿತೀಶ್ ಕುಮಾರ್ ಅವರನ್ನು, ಬಿಜೆಪಿ ಇಷ್ಟು ಬೇಗ ಹುದ್ದೆಯಿಂದ ಪದಚ್ಯುತಗೊಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನಮ್ಮ ನಾಯಕ ತೇಜಸ್ವಿ ಯಾದವ್ ಜೆಡಿಯು ಪಕ್ಷವನ್ನು ಬಿಜೆಪಿ ನಾಶಪಡಿಸುತ್ತದೆ, ನಿತೀಶ್ ಕುಮಾರ್ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತದೆ ಎಂದು ಆಗಾಗ್ಗೆ ಹೇಳುತ್ತಿದ್ದರು ಆ ಮಾತು ಈಗ ನಿಜವಾಗಿದೆ ಎಂದು ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದ ನಿತೀಶ್
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ನಿತೀಶ್, ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದರು. ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿರಂತರವಾಗಿ ನನ್ನ ಮೇಲೆ ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ಇರಿಸಿದ್ದೀರಿ. ಆ ನಂಬಿಕೆಯ ಬಲದ ಮೇಲೆ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಿತೀಶ್ ಕುಮಾರ್ ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಸಹ ಅನೇಕ ಸಲ ನಿಮಗೆ ನನ್ನ ಕೃತಜ್ಞತೆ ಸಲ್ಲಿಸಿದ್ದೇನೆ, ನನ್ನ ಸಂಸದೀಯ ಪ್ರಯಾಣದ ಆರಂಭದಿಂದಲೂ, ಬಿಹಾರ ವಿಧಾನಸಭೆಯ ಎರಡೂ ಸದನಗಳ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯನಾಗಬೇಕೆಂಬ ಬಯಕೆ ಮನಸ್ಸಲ್ಲಿ ಮನೆ ಮಾಡಿತ್ತು, ಅದಕ್ಕನುಗುಣವಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ನಿತೀಶ್ ಕುಮಾರ್ ಇಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಜರಿರುವ ನಿರೀಕ್ಷೆಯಿದೆ(ಏಜೆನ್ಸೀಸ್).