ವಿವಾಹ ಎಂದರೆ ಬದ್ಧತೆ ಎಂಬ ಮೌಲ್ಯವನ್ನು ಕಾಪಾಡಿಕೊಂಡು ಬಂದ ಸಮಾಜ ನಮ್ಮದು. ಮದುವೆಯ ನಂತರ ಬದುಕು ಬದಲಾಗುತ್ತದೆ, ಅದಕ್ಕೆ ಹೀಗೆ ಸಿದ್ಧರಾಗಬೇಕು ಎಂದು ನಮ್ಮ ಹಿರಿಯರು ತಮ್ಮ ಅನುಭವಗಳ ಮೂಲಕ ಹುಡುಗಿಗೂ, ಹುಡುಗನಿಗೂ ಮಾರ್ಗದರ್ಶನ ಮಾಡಿ ಮದುವೆ ಮತ್ತು ನಂತರದ ದಾಂಪತ್ಯ ಬದುಕಿಗೆ ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದರು. ಈಗ ಸನ್ನಿವೇಶ ಮತ್ತು ಮಾನಸಿಕತೆ ಎರಡೂ ಬದಲಾಗಿದೆ. ಮದುವೆಯನ್ನು ಬದ್ಧತೆಯನ್ನಾಗಿ ಅಲ್ಲ, ಅನುಕೂಲ ಸಿಂಧೂವಾಗಿ ನೋಡಲಾಗುತ್ತಿದೆ. ಸಾಕಷ್ಟು ಸೌಲಭ್ಯಗಳು ಇರಬೇಕು, ಆಸ್ತಿ, ಹಣ ಇದ್ದು, ಐಷಾರಾಮಿ ಬದುಕಿಗೆ ಅನುವಾಗಬೇಕು ಎಂದೇ ಬಯಸುತ್ತಾರೆ ಹೊರತು ಮದುವೆಯ ನಂತರ ಸತಿ-ಪತಿ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗಬಹುದು ಎಂಬ ಬಗ್ಗೆ ಯೋಚನೆಯೇ ಮಾಡುವುದಿಲ್ಲ.
ಎಷ್ಟೋ ಪ್ರಕರಣಗಳಲ್ಲಿ ಯುವತಿಯರು ಉಚ್ಚ ಶಿಕ್ಷಿತರಾಗಿರುವುದರಿಂದ, ಮನೆಕೆಲಸವನ್ನು ಕಲಿತಿರುವುದಿಲ್ಲ. ಹಾಗಾಗಿ, ಮದುವೆಯಾದ ಮೇಲೂ ಅದೇ ಪರಿಸ್ಥಿತಿ ಮುಂದುವರಿಯಬೇಕು ಎಂದು ಬಯಸಿದರೆ ಸಮಸ್ಯೆಗಳ ಆರಂಭ. ಕನಿಷ್ಠಪಕ್ಷ ಗಂಡ-ಹೆಂಡತಿ ತಾವು ಅಡುಗೆ ಮಾಡಿ ಉಣ್ಣುವಷ್ಟಾ ದರೂ ಮನೆಕೆಲಸ ಇಬ್ಬರಿಗೂ ಗೊತ್ತಿರಬೇಕು. ಮೊದಲು ಮದುವೆಯೆಂದರೆ ಸಾಮಾಜಿಕ ಸುರಕ್ಷತೆಯ ಭಾವವಿತ್ತು. ಈಗ ಹಾಗಲ್ಲ. ಹಣಕಾಸು ಸುರಕ್ಷತೆಯೇ ಮುಖ್ಯವಾಗಿರುವುದರಿಂದ ವಿವಾಹ ಕೂಡ ವಾಣಿಜ್ಯ ವಹಿವಾಟಿನ ಸ್ವರೂಪ ಪಡೆದುಕೊಂಡಿದೆ. ಏನೆಲ್ಲ ಅನುಕೂಲತೆಗಳಿವೆ, ಆದಾಯದ ಎಷ್ಟು ಮೂಲಗಳಿವೆ, ಭವಿಷ್ಯಕ್ಕೆ ಹಣಕಾಸಿನ ಭದ್ರತೆ ಏನಿದೆ... ಹೀಗೆ ಈ ಅಂಶಗಳನ್ನೆಲ್ಲ ಅವಲೋಕಿಸುತ್ತ ಮದುವೆಯಾಗಲು ನೋಡಿದರೆ, ಅದು ಬರೀ ಒಂದು ಆಯಾಮದ ಮದುವೆಯಾಗುತ್ತದೆ.
ಮದುವೆಯಾದ ಬಳಿಕ ತಾವಂದುಕೊಂಡಂತೆ ಇಲ್ಲ ಎಂದೆನಿಸಿ ದರೆ ಸಂಬಂಧ ಮುರಿದು ಬೀಳಲು ಈಗ ಹೆಚ್ಚಿನ ಸಮಯವೇ ಬೇಕಿಲ್ಲ. ಏಕೆಂದರೆ, ತಾಳ್ಮೆ, ಸಹನಶೀಲತೆ ಎಂಬುದು ದಾಂಪತ್ಯದಿಂದ ಮರೆಯಾಗುತ್ತಿದೆ. ವಿಪರ್ಯಾಸ ಎಂದರೆ, ಹುಡುಗಿಯರ ಅಪೇಕ್ಷೆಗಳು ಹೆಚ್ಚಿರುವುದರಿಂದ ಯುವಕರು ಮದುವೆಯ ಮುಂಚೆ ಮನೆಖರೀದಿಗೆ ಮುಂದಾಗುತ್ತಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತವನ್ನು ಸಾಲವಾಗಿ ತೆಗೆದುಕೊಂಡು, ಸಂಬಳದ ಬಹುಭಾಗವನ್ನು ಇಎಂಐಗೆ ವಿನಿಯೋಗಿಸುತ್ತಿದ್ದಾರೆ. ಮದುವೆಯಾದ ತಕ್ಷಣ ಮನೆಯನ್ನು ಜಂಟಿ ಮಾಲೀಕತ್ವ (ಜಾಯಿಂಟ್ ಓನರ್ಶಿಪ್)ಕ್ಕೆ ಒಳಪಡಿಸಿ, ಗಂಡ-ಹೆಂಡತಿ ಇಬ್ಬರೂ ಇಎಂಐ ಕಟ್ಟುತ್ತಾರೆ. ಇಂಥ ಆರ್ಥಿಕ ಒತ್ತಡಗಳು ದಾಂಪತ್ಯ ಬದುಕಿಗೆ ಮುಳುವಾಗುತ್ತಿವೆ.
ದಾಂಪತ್ಯವೆಂದರೆ ರಿಯಾಲಿಟಿ ಶೋವಲ್ಲ: ಎಷ್ಟೋ ದಂಪತಿ ಬರೀ ಅನುಮಾನ ಮತ್ತು ತಾಕಲಾಟದಲ್ಲೇ ಬದುಕುತ್ತಿದ್ದಾರೆ. ದುರಂತವೆಂದರೆ ಕ್ಯಾಮೆರಾ ಇರಿಸಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಪ್ರತಿಯೊಂದಕ್ಕೂ ಇವರ ಬಳಿ ವಿಡಿಯೋ, ಆಡಿಯೋ ಸಾಕ್ಷ್ಯಗಳು ಲಭ್ಯ ಇರುತ್ತವೆ. ಆದರೆ, ದಾಂಪತ್ಯವೆಂದರೆ ರಿಯಾಲಿಟಿ ಶೋ ಅಲ್ಲ. ಅದು ನಂಬಿಕೆ, ಪರಸ್ಪರ ಗೌರವ ಮತ್ತು ಬದ್ಧತೆ ಒಳಗೊಂಡಿರಬೇಕು. ಎಲ್ಲ ಸಮಸ್ಯೆಗಳಿಗೂ ವಿಚ್ಛೇದನ ಪರಿಹಾರವಲ್ಲ. ಹಿಂದೆಲ್ಲ, ವಿಚ್ಛೇದನ ಪ್ರಕರಣದ ಫೈಲ್ ನಾಲ್ಕೈದು ಪುಟಗಳಿಗೆ ಸೀಮಿತವಾಗಿರುತ್ತಿತ್ತು. ಈಗ ಒಂದೊಂದು ಕೇಸಿನ ಫೈಲ್ 500-550 ಪೇಜುಗಳಷ್ಟಿರುತ್ತದೆ!
ಉತ್ಸಾಹವೇ ಇಲ್ಲ: ಈಗ ಮದುವೆ ಎಂದರೆ ಬರೀ 3 ದಿನಗಳ ಸಂಭ್ರಮವಷ್ಟೇ. ಆ ಬಳಿಕ ಯಾವುದೇ ಉತ್ಸಾಹ ಇರುವುದಿಲ್ಲ. ಹಿಂದೆಲ್ಲ ಮದುವೆ ಎಂದರೆ ಉತ್ಸಾಹ, ಕನಸು, ಕನವರಿಕೆಗಳು ಇರುತ್ತಿದ್ದವು. ಈಗ ಲೈಂಗಿಕ ಶಿಕ್ಷಣದ ಅರಿವಿನಿಂದ ಎಲ್ಲವೂ ಗೊತ್ತಿರುತ್ತದೆ ಅಥವಾ ಮದುವೆ ಮುಂಚೆಯೇ ರಿಲೇಶನ್ಶಿಪ್ನಲ್ಲಿ ಉತ್ಸಾಹ ತೋರಿರುತ್ತಾರೆ. ವಿಚ್ಛೇದನ ಎಂಬುದು ಕಾನೂನು ಒದಗಿಸಿರುವ ರಕ್ಷಣಾತ್ಮಕ ವ್ಯವಸ್ಥೆ ಹೌದು. ಪತ್ನಿಯ ಜೀವಕ್ಕೆ ಬೆದರಿಕೆ ಇದ್ದಲ್ಲಿ, ದಿನವೂ ಕಿರುಕುಳ ಇದ್ದಲ್ಲಿ ಅಥವಾ ಇತರ ಗಂಭೀರ ಕಾರಣಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನ್ಯಾಯ ಪಡೆಯಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ದುರದೃಷ್ಟಕರ ಸಂಗತಿ ಎಂದರೆ, ಮಹಿಳೆಯರ ರಕ್ಷಣೆಗೆ ಇರುವ ಕಾನೂನು ಎಷ್ಟೋ ಪ್ರಕರಣಗಳಲ್ಲಿ ದುರುಪಯೋಗವಾಗುತ್ತಿದೆ.
1. ಮದುವೆಯಾಗಿ ಕೆಲ ತಿಂಗಳುಗಳಷ್ಟೇ ಕಳೆದಿ ರುತ್ತವೆ. ಆದರೆ, ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದಾಗ ಮೆಂಟನೆನ್ಸ್ ನಿಮಿತ್ತ ಲಕ್ಷ, ಕೋಟಿಯಲ್ಲಿ ಬೇಡಿಕೆ ಇಡಲಾಗುತ್ತದೆ.
2. ‘ವೀಸಾ’ ಮದುವೆಗಳೂ ನಡೆಯುತ್ತಿವೆ. ಅಂದರೆ, ವಿದೇಶದಲ್ಲಿರುವ ಹುಡುಗನನ್ನೋ ಅಥವಾ ಹುಡುಗಿಯನ್ನೋ ಮದುವೆಯಾದರೆ ಬಾಳಸಂಗಾತಿ ವೀಸಾ ಪಡೆದು, ವಿದೇಶದಲ್ಲಿ ಕೆಲಸ ಮಾಡಬಹುದು ಎಂಬ ಯೋಚನೆ!
3. ಅದ್ದೂರಿ ಮದುವೆಗಾಗಿ ಸಾಲ ಮಾಡುವ ಪ್ರವೃತ್ತಿ ಹೆಚ್ಚಿದೆ. ಇದು ಹುಡುಗಿ ಮನೆಯವರಿಗೆ ಸೀಮಿತವಾಗಿಲ್ಲ. ಗಂಡಿನ ಕಡೆಯವರೂ ಮದುವೆಗೆ ಸಾಲ ಮಾಡಿ, ಇಎಂಐ ಜಾಲದಲ್ಲಿ ಬಂಧಿಯಾಗುತ್ತಿದ್ದಾರೆ.
4. ಹುಡುಗ-ಹುಡುಗಿಗೆ ಮಾತ್ರವಲ್ಲ, ಅವರ ತಂದೆ-ತಾಯಿಗೂ ಮಕ್ಕಳ ಮದುವೆ ಒಂದು ಭಯವಾಗಿ ಕಾಡುತ್ತಿದೆ. ಮದುವೆ ಮಾಡಿಕೊಂಡ ದಿನವೇ ಅಥವಾ ಮರುದಿನವೇ ನವದಂಪತಿ ಪ್ರತ್ಯೇಕ ವಾಸಕ್ಕೆ ಹೋಗುತ್ತಿದ್ದಾರೆ. ಇದು, ಹಿರಿಯರಲ್ಲಿ, ಮಕ್ಕಳು ದೂರವಾದ ಭಾವನಾತ್ಮಕ ಸಂಕಟವನ್ನು ಹುಟ್ಟುಹಾಕಿದೆ. ಆದರೆ, ‘ಮಕ್ಕಳು ಸುಖವಾಗಿದ್ದರೆ ಸಾಕು’ ಎಂದು ಕೆಲ ಹಿರಿಯರು ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ.