ಶಾರ್ಜೀಲ್ ಇಮಾಮ್ (Sharjeel Imam) ​ಗೆ ಮಧ್ಯಂತರ ಜಾಮೀನು  
ದೇಶ

ಗಲಭೆ ಪ್ರಕರಣ: ಶಾರ್ಜೀಲ್ ಇಮಾಮ್‌ಗೆ 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ ದೆಹಲಿ ನ್ಯಾಯಾಲಯ | Sharjeel Imam

ಪ್ರಮುಖ ಮುಖ್ಯಾಂಶಗಳು

  • 2020 ರ ದೆಹಲಿ ಗಲಭೆ ಪ್ರಕರಣ
  • ಪ್ರಮುಖ ಆರೋಪಿ ಶಾರ್ಜೀಲ್ ಇಮಾಮ್​ಗೆ ಮಧ್ಯಂತರ ಜಾಮೀನು
  • 10 ದಿನಗಳ ಜಾಮೀನನ್ನು ನೀಡಿದ ದೆಹಲಿ ನ್ಯಾಯಾಲಯ
ನವದೆಹಲಿ: 2020ರ ದೆಹಲಿ ಗಲಭೆಯ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿರುವ ಆಕ್ಟಿವಿಸ್ಟ್ ಶಾರ್ಜೀಲ್ ಇಮಾಮ್‌ (Sharjeel Imam) ಗೆ ದೆಹಲಿಯ ಕರ್ಕರ್ದೂಮಾ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದೆ.
ತಮ್ಮ ಸಹೋದರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಶಾರ್ಜೀಲ್ ಇಮಾಮ್ ಜಾಮೀನು ಕೋರಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಜಾಜ್, 10 ದಿನಗಳ ಅವಧಿಗೆ ಜಾಮೀನು ಮಂಜೂರು ಮಾಡಿದ್ದು, ನಿಗದಿತ ಸಮಯದ ನಂತರ ಇಮಾಮ್ ಮತ್ತೆ ಜೈಲಿಗೆ ವಾಪಸಾಗಬೇಕೆಂದು ಆದೇಶಿಸಿದ್ದಾರೆ.

ಏನಿದು ದೆಹಲಿ ಗಲಭೆ ಪ್ರಕರಣ?

2020ರಲ್ಲಿ ದೆಹಲಿಯಲ್ಲಿ ನಡೆದ ಭೀಕರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾರ್ಜೀಲ್ ಇಮಾಮ್ ಮೇಲೆ ಹಲವು ಗಂಭೀರ ಆರೋಪಗಳಿವೆ. ಈ ಹಿಂದೆಯೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಮೀಪ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಅವರ ವಿರುದ್ಧ ದೋಷಾರೋಪಣ ಪಟ್ಟಿ ದಾಖಲಾಗಿತ್ತು.
ಅಂದು ಇಮಾಮ್ ಕೇವಲ ಪ್ರಚೋದನೆ ನೀಡಿದ್ದಲ್ಲ, ಬದಲಿಗೆ ಆ ಹಿಂಸಾಚಾರದ ಹಿಂದೆ ಇದ್ದ ದೊಡ್ಡ ಸಂಚಿನ ಭಾಗವಾಗಿದ್ದರು ಎಂದು ನ್ಯಾಯಾಲಯ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಪದವಿ ವಿದ್ಯಭ್ಯಾಸ ಮಾಡುತ್ತಿದ್ದ ಶಾರ್ಜೀಲ್ ಇಮಾಮ್, 2019ರ ಡಿಸೆಂಬರ್ 13 ರಂದು ಜಾಮಿಯಾ ಸಮೀಪ ನೀಡಿದ್ದ ಭಾಷಣ ಬಹಳ ಪ್ರಚೋದನಕಾರಿಯಾಗಿತ್ತು ಎಂದು ನ್ಯಾಯಾಲಯ ಹೇಳಿತ್ತು.

ಇಮಾಮ್ ಮೇಲಿರುವ ಆರೋಪಗಳೇನು?

ಶಾರ್ಜೀಲ್ ಇಮಾಮ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಗಲಭೆ, ಪ್ರಚೋದನೆ, ಧರ್ಮಗಳ ನಡುವೆ ದ್ವೇಷ ಹರಡುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ಹೇರಲಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಅಂದು ನಡೆದ ಆ ದೊಡ್ಡ ಗಲಭೆ ಯಾವುದೇ ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಅದೊಂದು ವ್ಯವಸ್ಥಿತ ಯೋಜನೆಯ ಭಾಗವಾಗಿತ್ತು. ಶರ್ಜೀಲ್ ಇಮಾಮ್ ಅವರ ಭಾಷಣದ ಮೂಲಕ ಜನರನ್ನು ಪ್ರಚೋದಿಸಿ, ರಸ್ತೆ ತಡೆ ಮಾಡುವಂತೆ ಉತ್ತೇಜಿಸಲಾಗಿತ್ತು. ಇಮಾಮ್ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಈಗ 10 ದಿನಗಳ ಕಾಲ ಜೈಲಿನಿಂದ ಹೊರಬರುತ್ತಿರುವ ಶಾರ್ಜೀಲ್ ಇಮಾಮ್, ಮದುವೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ಪೂರೈಸಿ ಮತ್ತೆ ನ್ಯಾಯಾಲಯದ ನಿರ್ದೇಶನದಂತೆ ಶರಣಾಗಬೇಕಿದೆ. ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಈ ಗಲಭೆ ಪ್ರಕರಣದ ವಿಚಾರಣೆ ಮುಂದುವರಿದಿದೆ,(ಏಜನ್ಸೀಸ್​).