Rinku Singh Father Passed Away | ರಿಂಕು ಸಿಂಗ್ ತಂದೆ ಖಚಂದ್ರ ಸಿಂಗ್ ನಿಧನ 
ದೇಶ

ಸಿಲಿಂಡರ್ ಮಾರಿ ಮಗನನ್ನು ಸ್ಟಾರ್ ಮಾಡಿದ್ದ 'ಮಹಾ ತಂದೆ' ಇನ್ನಿಲ್ಲ...ಕ್ಯಾನ್ಸರ್ ವಿರುದ್ಧದ ಹೋರಾಟ ಸೋತ ರಿಂಕು ತಂದೆ! | Rinku Singh Father Passed Away

Rinku Singh Father Passed Away: ಟಿ20 ವಿಶ್ವಕಪ್ ಗುಂಗಿನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದ್ದು, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ತಂದೆ ಖಚಂದ್ರ ಸಿಂಗ್, ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನೇಕ ದಿನಗಳಿಂದ 4ನೇ ಹಂತದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಖಚಂದ್ರ ಸಿಂಗ್​, ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ವೆಂಟಿಲೇಟರ್‌ನಲ್ಲಿ ಕೊನೆಕ್ಷಣ

ಖಚಂದ್ರ ಸಿಂಗ್ ಸ್ಥಿತಿ ಕಳೆದ ಒಂದು ವಾರದಿಂದ ಅತ್ಯಂತ ಗಂಭೀರವಾಗಿತ್ತು, ಲಿವರ್​ ಫೇಲ್ಯೂರ್​ ಜೊತೆಗೆ ಕಿಡ್ನಿ ಸಮಸ್ಯೆಗಳೂ ಕಾಣಿಸಿಕೊಂಡಿದ್ದರಿಂದ ಅವರನ್ನು ವೆಂಟಿಲೇಟರನಲ್ಲಿ ಇರಿಸಲಾಗಿತ್ತು. ಮೂತ್ರಪಿಂಡ ಬದಲಿ ಚಿಕಿತ್ಸೆ ನೀಡುತ್ತಿದ್ದರೂ, ದೇಹ ಸ್ಪಂದಿಸಲಿಲ್ಲ. ಇಂದು ಮುಂಜಾನೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.

ಗ್ಯಾಸ್​ ಮಾರಾಟದ ಮೂಲಕ ಮಗನಿಗೆ ನೆರವಾಗಿದ್ದ ಖಚಂದ್ರ ಸಿಂಗ್

ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಖಚಂದ್ರ ಸಿಂಗ್ ಅಲಿಗಢದಲ್ಲಿ ಮನೆ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ಕಾಯಕ ಮಾಡುತ್ತಲೇ ಮಗನ ಕ್ರಿಕೆಟ್ ಕನಸಿಗೆ ನೀರೆರದಿದ್ದರು. ರಿಂಕು ಸಿಂಗ್ ಐಪಿಎಲ್ ಮತ್ತು ಟೀಮ್ ಇಂಡಿಯಾದಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಆಟಗಾರನಾದ ಮೇಲೂ ಸಹ ಅವರ ತಂದೆ ಖಚಂದ್ರ ತಮ್ಮ ಸಿಲಿಂಡರ್ ವಿತರಿಸುವ ವೃತ್ತಿಯನ್ನು ಮುಂದುವರಿಸಿದ್ದರು ಎನ್ನಲಾಗಿದೆ.

ವಿಶ್ವಕಪ್ ಬಿಟ್ಟು ಓಡಿ ಬಂದಿದ್ದ ರಿಂಕು

2026ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತ ತಂಡದೊಂದಿಗೆ ಚೆನ್ನೈನಲ್ಲಿದ್ದ ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನವೇ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು ಬಿಸಿಸಿಐ ಅನುಮತಿ ಪಡೆದು ತುರ್ತಾಗಿ ಮನೆಗೆ ಮರಳಿದ್ದರು. ಅಪ್ಪನ ಅಂತ್ಯಕಾಲದಲ್ಲಿ ಜೊತೆಗಿರಲು ಬಯಸಿದ್ದ ಮಗನಿಗೆ ಈಗ ಈ ಅಗಲಿಕೆ ದೊಡ್ಡ ಆಘಾತ ತಂದಿದೆ(ಏಜೆನ್ಸೀಸ್​​).