Haryana Congress | ಹರಿಯಾಣ ಕಾಂಗ್ರೆಸ್‌ನಲ್ಲೂ ಬಿಕ್ಕಟ್ಟು!
ಚಂಡೀಗಢ: ಪಕ್ಕದ ಪಂಜಾಬ್ ಕಾಂಗ್ರೆಸ್‌ನಲ್ಲಿನ (Haryana Congress) ಆಂತರಿಕ ಬಿಕ್ಕಟ್ಟಿನ ಬೆನ್ನಲ್ಲೇ, ಇದೀಗ ಹರಿಯಾಣ ಕಾಂಗ್ರೆಸ್‌ನಲ್ಲೂ ಭಿನ್ನಮತ ಶುರುವಾಗಿದ್ದು, ಪಕ್ಷದ ನೂತನ ಉಸ್ತುವಾರಿ ಸಂಜಯ್ ದತ್ ಸಮ್ಮುಖದಲ್ಲೇ ನಡೆದ ನಾಯಕರ ಪ್ರಮುಖ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರಿಯಾಣ ಕಾಂಗ್ರೆಸ್‌ನ ಹೊಸ ಉಸ್ತುವಾರಿ ಸಂಜಯ್ ದತ್ ಅವರು ಚಂಡೀಗಢದಲ್ಲಿರುವ ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಹಿರಿಯ ನಾಯಕ ಬಿರೇಂದರ್ ಸಿಂಗ್, ಸಂಸದೆ ಕುಮಾರಿ ಸೆಲ್ಜಾ, ದೀಪೇಂದರ್ ಸಿಂಗ್ ಹೂಡಾ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಶಾಸಕರು ಮತ್ತು ಸಂಸದರು ಭಾಗವಹಿಸಿದ್ದರು.
ವೇದಿಕೆಯ ಮಧ್ಯಭಾಗದಲ್ಲಿ ರಾಜ್ಯ ಉಸ್ತುವಾರಿ ಸಂಜಯ್ ದತ್ ಕುಳಿತಿದ್ದರೆ, ಅವರ ಬಲಬದಿಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಎಡಬದಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಆಸೀನರಾಗಿದ್ದರು. ಸುರ್ಜೇವಾಲಾ ಅವರ ಪಕ್ಕದಲ್ಲಿ ದೀಪೇಂದರ್ ಸಿಂಗ್ ಹೂಡಾ ಕುಳಿತಿದ್ದರು.
ವೇದಿಕೆಯಲ್ಲಿ ನಡೆದಿದ್ದೇನು..?
ಕಾರ್ಯಕ್ರಮ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ತಮ್ಮ ಆಸನದಿಂದ ಎದ್ದುಬಂದ ಭೂಪಿಂದರ್ ಸಿಂಗ್ ಹೂಡಾ, ನಿರೂಪಕರಿಂದ ಮೈಕ್ ಪಡೆದು ಹರಿಯಾಣಿ ಭಾಷೆಯಲ್ಲಿ ಮಾತನಾಡಿದರು. ನೀವು ನನಗೆ ಆಶೀರ್ವಾದ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ರಣದೀಪ್ ಸುರ್ಜೇವಾಲಾರವರು ಹೇಳಿದ್ದರು. ನಾನು ರಣದೀಪ್ ಅವರಿಗೆ ಹೇಳುವುದೇನೆಂದರೆ, ನೀವು ನನಗೆ ಬೆಂಬಲ ನೀಡಿ, ಆ ಬಳಿಕ ಧಮಾಕಾ ನೋಡಿ ಎಂದು ಹೂಡಾ ಹೇಳಿದರು.
ಹೂಡಾ ಅವರ ಈ ಹೇಳಿಕೆಗೆ ತಕ್ಷಣವೇ ತಿರುಗೇಟು ನೀಡಿದ ರಣದೀಪ್ ಸಿಂಗ್ ಸುರ್ಜೇವಾಲಾ ಮೈಕ್ ಪಡೆದು, ನಾನು ನಿಮಗೆ ಬೆಂಬಲ ನೀಡಲು ಪ್ರಾರಂಭಿಸಿ ಬರೊಬ್ಬರಿ 20 ವರ್ಷಗಳೇ ಕಳೆದಿವೆ. ಈಗ ನನಗೆ ಬೆಂಬಲ ನೀಡುವ ಸರದಿ ನಿಮ್ಮದು ಎಂದು ನೇರವಾಗಿಯೇ ಸವಾಲು ಹಾಕಿದರು. ಹರಿಯಾಣದ 56 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಮೂರು ಬಾರಿಯಷ್ಟೇ ಸ್ವಂತ ಬಲದ ಮೇಲೆ ಪೂರ್ಣ ಬಹುಮತ ಗಳಿಸಿದೆ. ಬರೀ ಶೇಕಡಾವಾರು ಮತಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಪಕ್ಷದ ಎಷ್ಟು ಶಾಸಕರು ಗೆದ್ದು ವಿಧಾನಸಭೆ ತಲುಪಿದ್ದಾರೆ ಎಂಬುದೇ ಮುಖ್ಯ ವಿಷಯ ಎಂದರು.
ವೇದಿಕೆಯಲ್ಲಿದ್ದ ಇತರ ನಾಯಕರು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ, ಹೂಡಾ ಮತ್ತು ಸುರ್ಜೇವಾಲಾ ನಡುವಿನ ಈ ಮಾತುಕತೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಹರಿಯಾಣ ಕಾಂಗ್ರೆಸ್‌ನಲ್ಲಿನ ಆಂತರಿಕ ಬಣ ರಾಜಕೀಯ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಹೂಡಾ ಸ್ಪಷ್ಟನೆ
ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆ ವಿಡಿಯೋದಲ್ಲಿ ನಡೆದ ಮಾತುಕತೆ ಕೇವಲ ತಮಾಷೆಯಾಗಿತ್ತು, ಸುರ್ಜೇವಾಲಾ ನನ್ನ ಆತ್ಮೀಯ ಗೆಳೆಯ ಎಂದು ಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ(ಏಜೆನ್ಸೀಸ್).