Ratna Debnath | ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ 
ದೇಶ

ಆರ್‌ಜಿ ಕರ್ ಪ್ರಕರಣದ ಕಿಚ್ಚು ಈಗ ಚುನಾವಣಾ ಅಖಾಡಕ್ಕೆ.. ಸಂತ್ರಸ್ತೆಯ ತಾಯಿಯನ್ನೇ ಕಣಕ್ಕಿಳಿಸಿದ ಬಿಜೆಪಿ! | Ratna Debnath

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಮುಂಬರುವ ವಿಧಾನಸಭಾ ಚುನಾವಣೆಗೆ ಅತ್ಯಂತ ಮಹತ್ವದ ರಾಜಕೀಯ ನಡೆಯೊಂದನ್ನು ಇರಿಸಿದೆ. ಇದರ ಭಾಗವಾಗಿ 2024ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್​ರನ್ನು (Ratna Debnath) ನಿರೀಕ್ಷೆಯಂತೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ಬುಧವಾರ ಬಿಡುಗಡೆಯಾದ 19 ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ದೇಬ್ನಾಥ್​ರ ಹೆಸರನ್ನು ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿದೆ. ಬಿಜೆಪಿಯ ಈ ನಿರ್ಧಾರವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಇಡೀ ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತಾದ ಚರ್ಚೆಯನ್ನು ಚುನಾವಣಾ ಪ್ರಚಾರದ ಕೇಂದ್ರಬಿಂದುವನ್ನಾಗಿಸುವ ಸ್ಪಷ್ಟ ಸೂಚನೆಯಾಗಿದೆ.
ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಲು ಸುದೀರ್ಘ ಹೋರಾಟ ನಡೆಸುತ್ತಿರುವ ರತ್ನಾ ದೇಬ್ನಾಥ್, ಈಗ ಆ ಹೋರಾಟವನ್ನು ರಾಜಕೀಯ ವೇದಿಕೆಯ ಮೂಲಕ ಮುಂದುವರಿಸಲು ನಿರ್ಧರಿಸಿದ್ದು, ತಾವು ಕಳೆದ ಕೆಲವು ಸಮಯದಿಂದ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಮೂಲಕ ವ್ಯವಸ್ಥಿತ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಚುನಾವಣಾ ರಾಜಕೀಯ ಪ್ರವೇಶಿಸಲು ಒಪ್ಪಿಗೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲೇ ನಡೆದ ಈ ಘೋರ ಅಪರಾಧದ ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದರೆ, ಟಿಎಂಸಿ ಇದನ್ನು ತಳ್ಳಿಹಾಕಿದೆ. ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು ಮತ್ತು ಕಳೆದ ವರ್ಷ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೂ, ಇದು ನ್ಯಾಯವಲ್ಲ ಎಂದಿರುವ ಕುಟುಂಬವು ಸರ್ಕಾರದ ಪರಿಹಾರವನ್ನು ತಿರಸ್ಕರಿಸಿ ತನ್ನ ಹೋರಾಟವನ್ನು ಮುಂದುವರಿಸಿದೆ.
ಮಮತಾ ಆಳ್ವಿಕೆಯನ್ನು ಕೊನೆಗೊಳಿಸಿಯೇ ಸಿದ್ಧ : ರತ್ನಾ ದೇಬ್ನಾಥ್​
ತನ್ನ ಮಗಳ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿದ್ದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್​, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರತ್ನಾ, ನನ್ನ ಮಗಳ ತನಿಖೆಗೆ ಅಡ್ಡಿಪಡಿಸಿದ ಮತ್ತು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ನನ್ನ ಮೊದಲ ಗುರಿ ಎಂದು ಗುಡುಗಿದ್ದರು. ಸ್ವತಃ ಬ್ಯಾನರ್ಜಿ ಅವರೇ ಗೃಹ ಖಾತೆಯನ್ನೂ ಹೊಂದಿರುವುದರಿಂದ, ಗೃಹ ಸಚಿವೆಯ ಆಳ್ವಿಕೆಯನ್ನು ಕೊನೆಗೊಳಿಸಲು ತಾವು ಈ ಮಾರ್ಗವನ್ನು ಆರಿಸಿಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದರು.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).