Trinamool Bhavan | ಟಿಎಂಸಿ ಕಚೇರಿ ಖಾಲಿ ಮಾಡುವಂತೆ ಮಾಲೀಕನ ಖಡಕ್ ಆರ್ಡರ್ 
ದೇಶ

ಮಮತಾ ಬ್ಯಾನರ್ಜಿಗೆ ತ್ರಿಬಲ್​ ಶಾಕ್!...ಲೀಸ್ ವಿವಾದದ ಹಿನ್ನೆಲೆ ಟಿಎಂಸಿ ಕಚೇರಿ ಖಾಲಿ ಮಾಡುವಂತೆ ಮಾಲೀಕನ ಖಡಕ್ ಆರ್ಡರ್ | Trinamool Bhavan

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಈಗಾಗಲೇ ತೀವ್ರ ಆಂತರಿಕ ಬಂಡಾಯ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ಗೆ (TMC) ಈಗ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. ಕೋಲ್ಕತ್ತಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಟಿಎಂಸಿ ಪಕ್ಷದ ಪ್ರಧಾನ ಕಚೇರಿಯ (Trinamool Bhavan) ಲೀಸ್ ಅವಧಿ ಮುಗಿದಿದ್ದು, ತಕ್ಷಣವೇ ಕಟ್ಟಡ ಖಾಲಿ ಮಾಡುವಂತೆ ಮಾಲೀಕರು ನೋಟಿಸ್ ನೀಡಿದ್ದಾರೆ.
ಟಾಪ್ಸಿಯಾದಲ್ಲಿದ್ದ ಟಿಎಂಸಿಯ ಮೂಲ ಕಚೇರಿಯ ನವೀಕರಣದ ಹಿನ್ನೆಲೆಯಲ್ಲಿ, ಮೇ 2022 ರಿಂದ ಈ ಐದು ಅಂತಸ್ತಿನ ಕಟ್ಟಡವನ್ನು ತಾತ್ಕಾಲಿಕ ಪ್ರಧಾನ ಕಚೇರಿಯನ್ನಾಗಿ ಬಳಸಲಾಗುತ್ತಿತ್ತು. ಇದರ ಮಾಲೀಕ ಹಾಗೂ ಮಮತಾ ಬ್ಯಾನರ್ಜಿ ಆಡಳಿತಾವಧಿಯಲ್ಲಿ ಹಲವು ಸರ್ಕಾರಿ ಗುತ್ತಿಗೆಗಳನ್ನು ಪಡೆದಿದ್ದ ಮಾಡರ್ನ್ ಡೆಕೋರೇಟರ್ಸ್ ಸಂಸ್ಥೆಯ ಮಾಲೀಕ ಎಸ್‌.ಕೆ. ಇನಾಮುರ್ ರೆಹಮಾನ್, ಒಪ್ಪಂದದ ಅವಧಿ ಮುಗಿದಿರುವುದರಿಂದ ಎರಡು ತಿಂಗಳೊಳಗೆ ಕಚೇರಿ ಖಾಲಿ ಮಾಡುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಬದಲಾಗಿರುವುದರಿಂದ ತಮ್ಮ ಕಟ್ಟಡದ ಸುರಕ್ಷತೆಯ ಬಗ್ಗೆ ಆಂತರಿಕ ಆತಂಕ ವ್ಯಕ್ತಪಡಿಸಿರುವ ಮಾಲೀಕರು, ಈ ಕುರಿತು ಪ್ರಗತಿ ಮೈದಾನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ತೃಣಮೂಲ ಭವನದ ಉಸ್ತುವಾರಿ ಸುಬೀರ್ ಮಜುಂದಾರ್, ಕಟ್ಟಡದ ಒಪ್ಪಂದವು 2027ರ ವರೆಗೆ ಚಾಲ್ತಿಯಲ್ಲಿದೆ ಮತ್ತು ಹೊಸ ಸರ್ಕಾರಕ್ಕೆ ಹತ್ತಿರವಾಗಲು ಮಾಲೀಕರು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಮತ್ತೊಂದೆಡೆ ಕಚೇರಿಯಿಂದ ಸದ್ದಿಲ್ಲದೆ ಪೀಠೋಪಕರಣಗಳನ್ನು ಸಾಗಿಸಲಾಗುತ್ತಿದ್ದು, ಕಟ್ಟಡದ ಬಣ್ಣವನ್ನೂ ಬದಲಾಯಿಸಲಾಗುತ್ತಿದೆ ಎಂಬ ವದಂತಿಗಳು ಕೇಳಿಬರುತ್ತಿವೆ.
ಈ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿರುವ ಟಿಎಂಸಿ ನಾಯಕ ಕುನಾಲ್ ಘೋಷ್, ಇದು ಕೇವಲ ತಾತ್ಕಾಲಿಕ ಕಚೇರಿಯಾಗಿತ್ತು ಹಾಗೂ ಟಾಪ್ಸಿಯಾದಲ್ಲಿರುವ ನಮ್ಮ ಖಾಯಂ ಪ್ರಧಾನ ಕಚೇರಿಯ ಮರುನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಸಬೂಬು ನೀಡಿದ್ದಾರೆ. ಈ ವಿವಾದವು ಮಾಲೀಕರು ಮತ್ತು ನಮ್ಮ ಪಕ್ಷದ ನಡುವಿನ ವೈಯಕ್ತಿಕ ವಿಷಯವಾಗಿದ್ದು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಚೇರಿ ವಿವಾದ ಒಂದು ಕಡೆಯಾದರೆ, ಪಕ್ಷದ ಒಳಗೆ ನಡೆದಿರುವ ದೊಡ್ಡ ಬಂಡಾಯ ಟಿಎಂಸಿಯ ಅಸ್ತಿತ್ವಕ್ಕೇ ಕುತ್ತು ತಂದಿದೆ. ಚುನಾವಣಾ ಸೋಲಿನ ಬೆನ್ನಲ್ಲೇ ಪಕ್ಷದ ಒಟ್ಟು 80 ಶಾಸಕರ ಪೈಕಿ 59 ಶಾಸಕರು ಮೊದಲ ಬಾರಿಗೆ ಶಾಸಕರಾಗಿರುವ ರಿತಬ್ರತಾ ಬ್ಯಾನರ್ಜಿ ನಾಯಕತ್ವದಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಸ್ಪೀಕರ್ ಅವರು ಟಿಎಂಸಿಯ ಅಧಿಕೃತ ಪ್ರಸ್ತಾಪವನ್ನು ತಿರಸ್ಕರಿಸಿ, ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ (LoP) ಎಂದು ಘೋಷಿಸಿರುವುದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.
ಕೇವಲ ಬಂಗಾಳ ಮಾತ್ರವಲ್ಲದೆ ಸಂಸತ್ತಿನಲ್ಲೂ ಟಿಎಮ್‌ಸಿಗೆ ಭಾರಿ ಪೆಟ್ಟು ಬಿದ್ದಿದೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಬಣವು ಲೋಕಸಭೆಯ 28 ಸಂಸದರ ಪೈಕಿ ಮೂರನೇ ಎರಡರಷ್ಟು ಅಂದರೆ ಬರೋಬ್ಬರಿ 20 ಸಂಸದರ ಬೆಂಬಲ ತಮಗಿದೆ ಎಂದು ಹೇಳಿಕೊಂಡಿದ್ದು, ತೃಣಮೂಲ ಕಾಂಗ್ರೆಸ್ ಅನ್ನು ತೊರೆದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಎಂಬ ಅಷ್ಟಾಗಿ ಪರಿಚಯವಿಲ್ಲದ ಪಕ್ಷದ ಜೊತೆ ವಿಲೀನಗೊಂಡಿರುವುದಾಗಿ ಪ್ರಕಟಿಸಿದೆ. ರಾಜ್ಯದಲ್ಲಿ ಅಧಿಕಾರ ಹೋದ ಬೆನ್ನಲ್ಲೇ ಶಾಸಕರು, ಸಂಸದರು ಹಾಗೂ ಕಚೇರಿಯೂ ಕೈತಪ್ಪುವ ಭೀತಿಯಲ್ಲಿರುವ ಮಮತಾ ಬ್ಯಾನರ್ಜಿ ಅವರ ರಾಜಕೀಯ ಭವಿಷ್ಯ ಈಗ ಅತ್ಯಂತ ಕಠಿಣ ಹಂತ ತಲುಪಿದೆ(ಏಜೆನ್ಸೀಸ್​).