Dharmapuri Arvind | ಹೊಸ ಬಾಂಬ್ ಸಿಡಿಸಿದ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ 
ದೇಶ

ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರ್ತಾರಾ ರೇವಂತ್ ರೆಡ್ಡಿ..? ಹೊಸ ಬಾಂಬ್ ಸಿಡಿಸಿದ ಬಿಜೆಪಿ ಸಂಸದ! | Dharmapuri Arvind

ಹೈದ್ರಾಬಾದ್​​: ತೆಲಂಗಾಣ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಲಿದ್ದಾರೆ ಎಂದು ನಿಜಾಮಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ (Dharmapuri Arvind) ಅಚ್ಚರಿಯ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ರಾಜಕೀಯ ನಡೆಗೆ ರೇವಂತ್ ರೆಡ್ಡಿ ಪರಿಸ್ಥಿತಿಯನ್ನು ಹೋಲಿಸಿದ್ದಾರೆ.
ಆರು ವರ್ಷಗಳ ಹಿಂದೆ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಬಳಿಕ ಅಲ್ಲಿನ ಪ್ರಭಾವಿ ನಾಯಕರಾಗಿ ಬೆಳೆದ ಮಾದರಿಯಲ್ಲೇ ತೆಲಂಗಾಣದಲ್ಲೂ ರಾಜಕೀಯ ಸ್ಥಿತ್ಯಂತರ ಆಗಲಿದೆ ಎಂದು ಸಂಸದ ಅರವಿಂದ್​ ಭವಿಷ್ಯ ನುಡಿದಿದ್ದಾರೆ.
ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಕಡೆಗಣಿಸಿ, ರೇವಂತ್ ರೆಡ್ಡಿಗೆ ಮುಖ್ಯಮಂತ್ರಿ ಪಟ್ಟ ನೀಡಿರುವುದು ಹೈಕಮಾಂಡ್ ಮಾಡಿದ ಬಹುದೊಡ್ಡ ತಪ್ಪು ಎಂದಿರುವ ಅರವಿಂದ್, ಇದರ ಪರಿಣಾಮವಾಗಿ ಮುಂದಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಸೋಲನ್ನು ಅನುಭವಿಸಲಿದೆ ಎಂದರು. ಈ ಹಿಂದೆ 1985 ಮತ್ತು 1994 ರಲ್ಲಿ ಕಾಂಗ್ರೆಸ್ ಹೇಗೆ ಹೀನಾಯವಾಗಿ ಸೋತಿತ್ತೋ, ಅದೇ ರೀತಿ 2028-29ರ ಚುನಾವಣೆಯಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲೇ ಕಾಂಗ್ರೆಸ್ ಅತ್ಯಂತ ಹೀನಾಯ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನನ್ನೊಂದಿಗೆ ಕೈಜೋಡಿಸುವುದೇ ಒಳಿತು ಎಂದಿದ್ದ ಪ್ರಧಾನಿ ಮೋದಿ

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ರೇವಂತ್ ರೆಡ್ಡಿಯನ್ನು ಉದ್ದೇಶಿಸಿ ಆಡಿದ್ದ ಮಾತುಗಳ ಬೆನ್ನಲ್ಲೇ ಸಂಸದ ಅರವಿಂದ್ ಈ ಹೇಳಿಕೆ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಅಂದು ವೇದಿಕೆಯಲ್ಲೇ ರೇವಂತ್ ರೆಡ್ಡಿ ಸಮ್ಮುಖದಲ್ಲೇ ಮಾತನಾಡಿದ್ದ ಪ್ರಧಾನಿ ಮೋದಿ, ನೀವು ಎಲ್ಲಿಗೆ ತಲುಪಬೇಕೆಂದುಕೊಂಡಿದ್ದೀರೋ ಅಲ್ಲಿಗೆ ತಲುಪಲು ಸಾಧ್ಯವಾಗದಿರಬಹುದು, ನನ್ನೊಂದಿಗೆ ಕೈಜೋಡಿಸುವುದೇ ನಿಮಗೆ ಒಳಿತು ಎಂದು ಹೇಳಿದ್ದರು. ಪ್ರಧಾನಿಯವರ ಈ ಮುಕ್ತ ಆಹ್ವಾನಕ್ಕೆ ತೆಲಂಗಾಣ ಸಿಎಂ ಕೇವಲ ನಸುನಗುತ್ತಾ ಸುಮ್ಮನಾಗಿದ್ದರು.
ಪ್ರಧಾನಿಯವರ ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಧರ್ಮಪುರಿ ಅರವಿಂದ್, ತಾವು ಬಿಜೆಪಿಯ ಒಬ್ಬ ಸಾಮಾನ್ಯ ತಳಮಟ್ಟದ ಕಾರ್ಯಕರ್ತನಾಗಿದ್ದು, ಇದರ ಹಿಂದೆ ಯಾವ ರಾಜಕೀಯ ಆಯಾಮ ಅಡಗಿದೆ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಆದರೆ ತೆಲಂಗಾಣ ರಾಜಕೀಯದಲ್ಲಿ ಸುವೇಂದು ಅಧಿಕಾರಿ ಮಾದರಿಯಲ್ಲೇ ಏನೋ ಒಂದು ದೊಡ್ಡ ರಾಜಕೀಯ ಬದಲಾವಣೆ ತೆರೆಮರೆಯಲ್ಲಿ ಸಿದ್ಧವಾಗುತ್ತಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಮುಂಬರುವ ಎರಡು ವರ್ಷಗಳಲ್ಲಿ ತೆಲಂಗಾಣ ರಾಜಕೀಯ ಹಲವು ದೊಡ್ಡ ಮಟ್ಟದ ಪಲ್ಲಟಗಳಿಗೆ ಸಾಕ್ಷಿಯಾಗಲಿದ್ದು, ಅಂತಿಮವಾಗಿ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​​).