ಮುಂಬೈ: "ಭಾರತಕ್ಕೆ ಯಾವಾಗ ಮರಳುವ ಉದ್ದೇಶ ಹೊಂದಿದ್ದೀರಿ?" ಎಂದು ಪರಾರಿಯಾದ ಉದ್ಯಮಿ ವಿಜಯ್ ಮಲ್ಯಾ ಅವರಿಗೆ ಬಾಂಬೆ ಹೈಕೋರ್ಟ್ ನೇರ ಪ್ರಶ್ನೆಯೊಂದನ್ನು ಎತ್ತಿದೆ.
ಫ್ಯೂಜಿಟಿವ್ ಎಕನಾಮಿಕ್ ಆಫೆಂಡರ್ಸ್ ಆಕ್ಟ್ (FEO Act) 2018ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮಲ್ಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಚಂದ್ರಶೇಖರ್ ಮತ್ತು ಗೌತಮ್ ಅಂಖಡ್ ಅವರಿದ್ದ ದ್ವಿಸದಸ್ಯ ಪೀಠವು ಈ ಪ್ರಶ್ನೆಯನ್ನು ಕೇಳಿದೆ.
2016ರ ಮಾರ್ಚ್‌ನಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಮಲ್ಯಾ ಅವರು, ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ಬಾಕಿ ಪ್ರಕರಣದಲ್ಲಿ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಹೈಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು, ತಮ್ಮನ್ನು ಪರಾರಿ ಆರ್ಥಿಕ ಅಪರಾಧಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ. ಮತ್ತೊಂದು, FEO ಕಾಯ್ದೆಯ ಸಾಂವಿಧಾನಿ ಕತೆಯನ್ನು ಪ್ರಶ್ನಿಸುವಂತೆ ಕೇಳಿದ್ದಾರೆ. ಮಲ್ಯಾ ಅವರು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುವವರೆಗೆ (ಅಂದರೆ ಭಾರತಕ್ಕೆ ಮರಳಿ ಒಳಗಾಗುವವರೆಗೆ) ಕಾಯ್ದೆಯ ಸಿಂಧುತ್ವದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.
ಮಲ್ಯಾ ಪರ ವಕೀಲ ಅಮಿತ್ ದೇಸಾಯ್ ಅವರು, ಅವರ ಆಸ್ತಿಗಳಿಂದ 14,000 ಕೋಟಿ ಜಪ್ತಿ ಮಾಡಲಾಗಿದ್ದು, ಬ್ಯಾಂಕ್‌ಗಳು 6,000 ಕೋಟಿ ವಸೂಲಿ ಮಾಡಿಕೊಂಡಿರುವುದರಿಂದ ಹಣಕಾಸು ಹೊಣೆಗಾರಿಕೆ ಮುಗಿದಿದೆ ಎಂದು ವಾದಿಸಿದರು. ಇತ್ತ ಜಾರಿ ನಿರ್ದೇಶನಾಲಯ (ED) ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಲ್ಯಾ ಅವರ ಎಕ್ಸ್‌ಟ್ರಾಡಿಷನ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು. ಪ್ರಕರಣವನ್ನು ಫೆಬ್ರವರಿ 12ಕ್ಕೆ ಮುಂದೂಡಲಾಗಿದೆ,(ಏಜೆನ್ಸೀಸ್).