ವಿದೇಶಿ ದೇಣಿಗೆಗೆ ಸಂಬಂಧಿಸಿದ ಕಾನೂನಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ, ‘ಎಫ್ಸಿಆರ್ಎ ತಿದ್ದುಪಡಿ ಮಸೂದೆ’ ಕುರಿತು ಆಗಸ್ಟ್ 12ರಂದು ಸಂಸತ್ತಿನಲ್ಲಿ ಚರ್ಚೆ ನಡೆಯಲಿದ್ದು, ಗೃಹ ಸಚಿವ ಅಮಿತ್ ಷಾ ಇದಕ್ಕೆ ಉತ್ತರ ನೀಡುವ ಸಾಧ್ಯತೆಯಿದೆ. ಅಷ್ಟಕ್ಕೂ ವಿದೇಶಿ ದೇಣಿಗೆ ಕಾಯ್ದೆಯಲ್ಲಿ ಸರ್ಕಾರ ಏನನ್ನು ಬದಲಾಯಿಸಲು ಹೊರಟಿದೆ? ವಿದೇಶಿ ಹಣ ರಾಷ್ಟ್ರೀಯ ಭದ್ರತೆ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುವುದನ್ನು ಇದು ಹೇಗೆ ತಡೆಯಲಿದೆ? ಈ ಕುರಿತಾದ ವಿವರ ಇಲ್ಲಿದೆ.
ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯು (ಎಫ್ಸಿಆರ್ಎ)-ಭಾರತದಲ್ಲಿರುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ದತ್ತಿ ಸಂಸ್ಥೆಗಳು ವಿದೇಶಗಳಿಂದ ಹಣವನ್ನು ಹೇಗೆ ಸ್ವೀಕರಿಸಬೇಕು ಮತ್ತು ವೆಚ್ಚ ಮಾಡಬೇಕು ಎಂಬುದನ್ನು ನಿಯಂತ್ರಿಸುತ್ತದೆ, ನಿರ್ಧರಿಸುತ್ತದೆ. ವಿದೇಶಿ ಹಣವು ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿ ಸರ್ಕಾರವು 1976ರಲ್ಲಿ ‘ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ’ (Foreign Contribution Control Act) ಯನ್ನು ಜಾರಿಗೆ ತಂದಿತು. ವಿದೇಶಿ ಶಕ್ತಿಗಳು ಭಾರತದ ಸ್ವಯಂಸೇವಾ ಸಂಸ್ಥೆಗಳು (ಎನ್ಜಿಒ), ಶಿಕ್ಷಣ ಸಂಸ್ಥೆಗಳು ಮತ್ತು ಟ್ರಸ್ಟ್ಗಳಿಗೆ ಹಣ ನೀಡುವ ಮೂಲಕ ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ಇದರ ಮುಖ್ಯ ಉದ್ದೇಶವಾಗಿತ್ತು.
2010ರಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮತ್ತು 2020ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಈ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಿದವು. ಉದಾಹರಣೆಗೆ, ಎನ್ಜಿಒಗಳು ತಮ್ಮ ಆಡಳಿತಾತ್ಮಕ ವೆಚ್ಚಗಳಿಗಾಗಿ ವಿದೇಶಿ ಹಣದ ಗರಿಷ್ಠ 20% ಭಾಗವನ್ನು ಮಾತ್ರ ಬಳಸಬಹುದು (ಮೊದಲು ಇದು 50% ಇತ್ತು). ಈ ಹಣವನ್ನು ದೆಹಲಿಯ ನಿರ್ದಿಷ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯ ಖಾತೆಗೆ ಮಾತ್ರ ಪಡೆಯಬೇಕು ಹಾಗೂ ಸಬ್-ಗ್ರಾಂಟ್ (ದೊಡ್ಡ ಎನ್ಜಿಒಗಳು ಸಣ್ಣ ಎನ್ಜಿಒಗಳಿಗೆ ಹಣ ವರ್ಗಾಯಿಸುವುದು) ಸಂಪೂರ್ಣ ನಿಷೇಧಿಸಲಾಯಿತು.
ಈಗ ಸರ್ಕಾರವು 3 ಪ್ರಮುಖ ಹೊಸ ಕ್ರಮಗಳನ್ನು ಕೈಗೊಂಡಿದೆ
1) ಸಂಸ್ಥೆಗಳು ತಮ್ಮ ಕೆಲಸ ಮತ್ತು ಪ್ರದೇಶವನ್ನು ಸ್ಪಷ್ಟಪಡಿಸಬೇಕು: ವಿದೇಶಿ ಹಣವನ್ನು ನಿರ್ದಿಷ್ಟವಾಗಿ ಯಾವ ಕೆಲಸಕ್ಕಾಗಿ ಮತ್ತು ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಬಳಸಲಾಗುತ್ತದೆ ಎಂಬುದನ್ನು ನೋಂದಣಿ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹಿಂದೆ ಸಾಮಾಜಿಕ ಅಥವಾ ಧಾರ್ವಿುಕ ಎಂಬ ಸಾಮಾನ್ಯ ವರ್ಗವನ್ನು ಬರೆಯಲಾಗುತ್ತಿತ್ತು.
2) ವಿದೇಶಿ ದೇಣಿಗೆಯಿಂದ ಮತಾಂತರ ಮಾಡುವಂತಿಲ್ಲ: ಧಾರ್ವಿುಕ ಚಟುವಟಿಕೆಗಳ ಪಟ್ಟಿಯಲ್ಲಿ ಪೂಜಾ ಸ್ಥಳಗಳ ನಿರ್ವಣ, ಧಾರ್ವಿುಕ ಶಿಕ್ಷಣ, ಸತ್ಸಂಗ ಮುಂತಾದವುಗಳಿಗೆ ಅನುಮತಿ ಇದೆ. ಆದರೆ ವಿದೇಶಿ ಹಣವನ್ನು ಬಳಸಿಕೊಂಡು ಇತರರ ಮತಾಂತರ ಮಾಡುವಂತಿಲ್ಲ.
3) ನೋಂದಣಿ ರದ್ದಾದರೆ ಆಸ್ತಿಯ ನಿರ್ವಹಣೆ ಸರ್ಕಾರಿ ಪ್ರಾಧಿಕಾರದಿಂದ: ಯಾವುದೇ ಸಂಸ್ಥೆಯ ಎಫ್ಸಿಆರ್ಎ ನೋಂದಣಿ ಅವಧಿ ಮುಗಿದರೆ ಅಥವಾ ನೋಂದಣಿ ರದ್ದಾದರೆ, ವಿದೇಶಿ ದೇಣಿಗೆಯಿಂದ ನಿರ್ವಿುಸಲಾದ ಅದರ ಆಸ್ತಿಪಾಸ್ತಿಗಳ ಸುರಕ್ಷತೆ, ನಿರ್ವಹಣೆಯನ್ನು ಸರ್ಕಾರದಿಂದ ನಾಮನಿರ್ದೇಶನಗೊಂಡ ಪ್ರಾಧಿಕಾರವು ಮಾಡುತ್ತದೆ. ಇದು ಪ್ರಸ್ತುತ ತಿದ್ದುಪಡಿ ಮಸೂದೆಯಲ್ಲಿರುವ ಪ್ರಮುಖ ನಿಬಂಧನೆಯಾಗಿದೆ. 2026ರ ಮಾರ್ಚ್ 25ರಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದ ಈ ಮಸೂದೆಯು ಇನ್ನೂ ಸಂಸತ್ತಿನಲ್ಲಿ ಅಂಗೀಕಾರವಾಗಬೇಕಿದೆ. ಸರ್ಕಾರದ ಪ್ರಕಾರ, ಎಫ್ಸಿಆರ್ಎನಲ್ಲಿರುವ ಕಾರ್ಯಾಚರಣೆಯ ಕೊರತೆಗಳನ್ನು ಸರಿಪಡಿಸಲು ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಂಸ್ಥೆಯ ನೋಂದಣಿ ರದ್ದಾದಾಗ ಅದರ ಆಸ್ತಿ ಮತ್ತು ಉಳಿದ ಹಣ ಯಾರಿಗೆ ಸೇರಬೇಕು ಎಂಬುದರ ಕುರಿತು ಈವರೆಗೆ ಸ್ಪಷ್ಟ ಕಾನೂನು ಇರಲಿಲ್ಲ. ಹೊಸ ಪ್ರಾಧಿಕಾರವು ಈ ಕೊರತೆಯನ್ನು ನೀಗಿಸಲಿದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಷ್ಟ್ರೀಯ ಭದ್ರತೆಯೇ ಇದರ ಮುಖ್ಯ ಉದ್ದೇಶ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮತಾಂತರಕ್ಕೆ ವಿದೇಶಿ ಹಣ
ಭಾರತದಲ್ಲಿ ವಿದೇಶಿ ದೇಣಿಗೆ ಮತ್ತು ಮತಾಂತರದ ನಡುವಿನ ನಂಟು ದಶಕಗಳಿಂದ ಸಾಮಾಜಿಕ, ರಾಜಕೀಯ ಮತ್ತು ಕಾನೂನಾತ್ಮಕ ಚರ್ಚೆಯ ಪ್ರಮುಖ ವಿಷಯವಾಗಿದೆ. ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಹೆಸರಿನಲ್ಲಿ ವಿದೇಶಗಳಿಂದ ದೇಣಿಗೆ ಸ್ವೀಕರಿಸಿ, ಆ ಹಣವನ್ನು ಪ್ರಚಾರ ಹಾಗೂ ಧಾರ್ವಿುಕ ಚಟುವಟಿಕೆಗಳಿಗೆ ಬಳಸಿರುವ ಬಗ್ಗೆ ಈ ಹಿಂದೆಯೂ ವಿವಾದ ತಲೆದೋರಿದ್ದವು. ಮುಖ್ಯವಾಗಿ ಹಿಂದುಳಿದ, ಗಿರಿಜನ, ಬುಡಕಟ್ಟು ಮತ್ತು ಬಡ ಪ್ರದೇಶಗಳಲ್ಲಿ ಉಚಿತ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಉದ್ಯೋಗ ಅಥವಾ ಆರ್ಥಿಕ ನೆರವಿನ ಭರವಸೆ ನೀಡಿ ಮತಾಂತರಕ್ಕೆ ಪ್ರೇರೇಪಿಸಲಾಗುತ್ತದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ತನ್ನ ವರದಿಯಲ್ಲಿ ವಿವರಿಸಿದೆ.
ಮಸೂದೆ ಅಂಗೀಕಾರದ ಪ್ರಕ್ರಿಯೆ
ಎಫ್ಸಿಆರ್ಎ ತಿದ್ದುಪಡಿ ವಿಧೇಯಕವು ಸಾಮಾನ್ಯ ವಿಧೇಯಕವಾಗಿದೆ. ಇದನ್ನು ಅಂಗೀಕಾರ ಮಾಡಲು ಸಂಸತ್ತಿನಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ‘ಸಾಧಾರಣ ಬಹುಮತ’ (50%+1) ಸಾಕು.
ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ 3 ಖಾಲಿ ಇವೆ. ಎಲ್ಲ ಸದಸ್ಯರು ಹಾಜರಿದ್ದರೆ ಬಹುಮತಕ್ಕೆ 271 ಮತಗಳು ಬೇಕು. ಎನ್ಡಿಎ ಒಕ್ಕೂಟದ ಬಳಿ ಪ್ರಸ್ತುತ 318 ಸಂಸದರಿದ್ದಾರೆ. ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದು, ಬಹುಮತಕ್ಕೆ 123 ಮತಗಳು ಬೇಕು. ಎನ್ಡಿಎ ಬಳಿ 152 ಸದಸ್ಯರಿದ್ದಾರೆ. ಆದ್ದರಿಂದ, ಸಂಖ್ಯಾಬಲದ ಆಧಾರದ ಮೇಲೆ ಎರಡೂ ಸದನಗಳಲ್ಲಿ ಈ ವಿಧೇಯಕವನ್ನು ಸುಲಭವಾಗಿ ಅಂಗೀಕರಿಸುವ ಸಾಮರ್ಥ್ಯ ಸರ್ಕಾರದ ಬಳಿಯಿದೆ.
ಸರ್ಕಾರದ ಮುಂದಿರುವ ‘ಧರ್ಮಸಂಕಟ’ವೇನು?
ಸರ್ಕಾರಕ್ಕಿರುವ ನಿಜವಾದ ಸವಾಲು ‘ಸಮಯ’. ಪ್ರಸ್ತುತ ಸರ್ಕಾರದ ಮುಂದೆ ಎಫ್ಸಿಆರ್ಎಗಿಂತಲೂ ದೊಡ್ಡ ಕಾರ್ಯಸೂಚಿ ಎಂದರೆ ‘ಕ್ಷೇತ್ರ ವಿಂಗಡಣೆ ಮಸೂದೆ’ಯನ್ನು ಅಂಗೀಕರಿಸುವುದು. ಇದಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿದ್ದರೂ 54 ಮತಗಳ ಕೊರತೆಯಿಂದಾಗಿ ಅಂಗೀಕಾರ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರವು ಎನ್ಡಿಎಯೇತರ ಪಕ್ಷಗಳ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಶಿವಸೇನಾ (ಉದ್ಧವ್ ಬಣ)ದ ಕೆಲವು ಸಂಸದರು, ಜೆಎಂಎಂ, ಡಿಎಂಕೆ ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ಪಕ್ಷಗಳ ಬೆಂಬಲವನ್ನು ಕ್ರೋಡೀಕರಿಸಲು ಬಿಜೆಪಿ ಮಾತುಕತೆ ನಡೆಸುತ್ತಿದೆ.
ಆದರೆ ಇಲ್ಲಿ ಎಫ್ಸಿಆರ್ಎ ತಿದ್ದುಪಡಿ ಮಸೂದೆಯು ತೊಡಕಾಗಿ ಪರಿಣಮಿಸಿದೆ. ವರದಿಗಳ ಪ್ರಕಾರ, ಕ್ಷೇತ್ರ ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಸಿದ್ಧವಿರುವ ಡಿಎಂಕೆ, ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ವೈಎಸ್ರ್ ಕಾಂಗ್ರೆಸ್ನಂತಹ ಪಕ್ಷಗಳು ಎಫ್ಸಿಆರ್ಎ ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ಕಾಯ್ದೆಯಿಂದ ತಮ್ಮ ಧಾರ್ವಿುಕ ಅಲ್ಪಸಂಖ್ಯಾತ ಮತಬ್ಯಾಂಕ್ಗೆ ಧಕ್ಕೆಯಾಗಬಹುದು ಎಂಬ ಭಯ ಈ ಪಕ್ಷಗಳಿಗಿದೆ. ಸರ್ಕಾರ ಇವರ ವಿರೋಧವನ್ನು ಮೀರಿ ಎಫ್ಸಿಆರ್ಎ ವಿಧೇಯಕವನ್ನು ಅಂಗೀಕಾರ ಮಾಡಿದರೆ, ಕ್ಷೇತ್ರ ವಿಂಗಡಣೆ ವಿಧೇಯಕಕ್ಕೆ ಇವರ ಬೆಂಬಲ ಸಿಗುವುದು ಕಷ್ಟವಾಗುತ್ತದೆ. ಒಂದೊಮ್ಮೆ ಈ ಪಕ್ಷಗಳು ಎಫ್ಸಿಆರ್ಎ ಅನ್ನು ವಿರೋಧಿಸಿ, ಕ್ಷೇತ್ರ ವಿಂಗಡಣೆಗೆ ಬೆಂಬಲ ನೀಡಿದರೆ ಅದು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಪ್ರಮುಖ ರಾಜಕೀಯ ವಿಧೇಯಕಗಳನ್ನು ಸರಿದೂಗಿಸಿಕೊಂಡು ಹೋಗುವುದು ಸರ್ಕಾರಕ್ಕಿರುವ ದೊಡ್ಡ ಧರ್ಮಸಂಕಟವಾಗಿದೆ.
ಏನೆಲ್ಲ ಕ್ರಮ?
ಸೇವಾ ಉದ್ದೇಶಗಳಿಗಾಗಿ ಬಂದ ಹಣವನ್ನು ಮತಾಂತರಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಪ್ರಮುಖ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳ (ಉದಾಹರಣೆಗೆ ಕಂಪ್ಯಾಷನ್ ಇಂಟರ್ನ್ಯಾಷನಲ್, ವರ್ಲ್ಡ್ ವಿಷನ್ ಇಂಡಿಯಾ ಮುಂತಾದವು) ಎಫ್ಸಿಆರ್ಎ ನೋಂದಣಿಯನ್ನು ರದ್ದುಗೊಳಿಸಿದ್ದು ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಚರ್ಚೆಗೆ ಕಾರಣವಾಗಿತ್ತು. ಕೆಲವು ವಿದೇಶಿ ಅನುದಾನಿತ ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳಿಗೆ ತಡೆ ಒಡ್ಡುವುದು ಮತ್ತು ದೇಶೀಯ ಪ್ರತಿಭಟನೆಗಳನ್ನು ಪ್ರಚೋದಿಸಲು ಹಣ ಬಳಸುತ್ತಿವೆ ಎಂಬ ಆರೋಪಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಎಫ್ಸಿಆರ್ಎ 2010 ಮತ್ತು 2020ರ ತಿದ್ದುಪಡಿಗಳ ಮೂಲಕ ವಿದೇಶಿ ಹಣ ಪಡೆಯುವ ಪ್ರಕ್ರಿಯೆಯನ್ನು ಬಿಗಿಗೊಳಿಸಿದೆ.
ಗೃಹ ಸಚಿವಾಲಯದ ಮಾರ್ಗದರ್ಶಿ ಸೂಚಿಗಳ ಪ್ರಕಾರ, ಬಲವಂತದ/ಆಮಿಷದ ಮತಾಂತರ, ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವುದು ಅಥವಾ ಉದ್ದೇಶಿತ ಕಾರ್ಯಾಚರಣೆಯನ್ನು ಹೊರತುಪಡಿಸಿ ಬೇರೆಡೆ ಹಣ ದುರ್ಬಳಕೆ ಮಾಡುವುದು ಎಫ್ಸಿಆರ್ಎ ನೋಂದಣಿ ರದ್ದತಿಗೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ನಿಯಮಗಳ ಪ್ರಕಾರ ವಿದೇಶಿ ಹಣವನ್ನು ಪ್ರಚಾರ ಅಥವಾ ಮತಾಂತರ ಚಟುವಟಿಕೆಗಳಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಳೆದೆರಡು ದಶಕಗಳಲ್ಲಿ ನಿಯಮ ಉಲ್ಲಂಘನೆ, ಲೆಕ್ಕಪತ್ರ ಸಲ್ಲಿಸದಿರುವುದು ಮತ್ತು ಮತಾಂತರ ಆರೋಪಗಳ ಹಿನ್ನೆಲೆಯಲ್ಲಿ 20,000ಕ್ಕೂ ಹೆಚ್ಚು ಎನ್ಜಿಒಗಳ ಎಫ್ಸಿಆರ್ಎ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಅಥವಾ ನವೀಕರಿಸಲಾಗಿಲ್ಲ.
ವಿರೋಧವೇಕೆ?
ಎನ್ಜಿಒಗಳು ಸಮಯಕ್ಕೆ ಸರಿಯಾಗಿ ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸದಿದ್ದರೆ ಅಥವಾ ಗೃಹ ಸಚಿವಾಲಯವು ಅರ್ಜಿಯನ್ನು ತಿರಸ್ಕರಿಸಿದರೆ, ಆ ಆಸ್ತಿಯು ಸರ್ಕಾರಿ ಪ್ರಾಧಿಕಾರದ ವಶಕ್ಕೆ ಹೋಗುತ್ತದೆ. ಇದರಿಂದ ದಶಕಗಳಿಂದ ಕಷ್ಟಪಟ್ಟು ನಿರ್ವಿುಸಿದ ಮೂಲಸೌಕರ್ಯ ಕೈತಪ್ಪಿಹೋಗುತ್ತದೆ ಎಂಬುದು ಎನ್ಜಿಒಗಳ ಭಯ.
ಈಗಿನ ಸ್ಥಿತಿ
ಪ್ರಸ್ತುತ ಎಫ್ಸಿಆರ್ಎ ಅಡಿಯಲ್ಲಿ 16 ಸಾವಿರ ಸಂಸ್ಥೆಗಳು ನೋಂದಾಯಿತವಾಗಿದ್ದು, ಪ್ರತಿವರ್ಷ 22,000 ಕೋಟಿ ರೂಪಾಯಿ ವಿದೇಶಿ ದೇಣಿಗೆ ಪಡೆಯುತ್ತಿವೆ. ಶಾಲೆಗಳು, ಆಸ್ಪತ್ರೆಗಳು ಮತ್ತು ಸಾಮಾಜಿಕ ಸೇವೆಗಳ ದೊಡ್ಡ ಭಾಗವು ಈ ಹಣವನ್ನು ನೆಚ್ಚಿಕೊಂಡಿದೆ.