Resort Politics In Mumbai | ಏಕನಾಥ್ ಶಿಂಧೆ ಬಣದ ಕಾರ್ಪೊರೇಟರ್‌ಗಳು ರೆಸಾರ್ಟ್ಗೆ ಶಿಫ್ಟ್
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಗೆಲುವು ಸಾಧಿಸಿದ್ದು, ಮಹಾರಾಷ್ಟ್ರದಲ್ಲಿ ರೆಸಾರ್ಟ್ ರಾಜಕೀಯ ಆರಂಭವಾಗಿರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಆಯ್ಕೆಯಾಗಿರುವ ಎಲ್ಲಾ ನೂತನ ಕಾರ್ಪೊರೇಟರ್‌ಗಳನ್ನು ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಡಿಸಿಎಂ ಶಿಂಧೆ ಸೇನೆಯ ಎಲ್ಲಾ 29 ಕಾರ್ಪೊರೇಟರ್‌ಗಳು ಮುಂಬೈನ ಬಾಂದ್ರಾದಲ್ಲಿರುವ ಪಂಚತಾರಾ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಕನಿಷ್ಠ ಮೂರು ದಿನಗಳ ಕಾಲ ಸಭೆ ಸೇರಲಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ಪಾಲಿಕೆಯಾದ ಬಿಎಂಸಿಯಲ್ಲಿ ಅಧಿಕಾರದ ಹೆಚ್ಚಿನ ಪಾಲನ್ನು ಪಡೆಯಲು ಶಿವಸೇನೆಯು ಈ ರೀತಿಯ ಒತ್ತಡ ತಂತ್ರ ಹೆಣೆದಿದೆ ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ ಶಿವಸೇನೆ ಮೇಯರ್ ಕೂರುವುದನ್ನು ನೋಡುವ ಕನಸ್ಸಿದೆ, ದೇವರು ಇಚ್ಛೆ ಇದ್ದರೆ ಈ ಕನಸು ನನಸಾಗುತ್ತದೆ ಎಂದು ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಶಿಂಧೆ ಈ ಕ್ರಮ ಕೈಗೊಂಡಿದ್ದಾರೆ. 227 ಸದಸ್ಯ ಬಲದ ಬಿಎಂಸಿಯಲ್ಲಿ 65 ಸ್ಥಾನಗಳನ್ನು ಗೆದ್ದ ಠಾಕ್ರೆ, ಬಿಎಂಸಿ ಮೇಲಿನ ತಮ್ಮ ಬಣದ ನಿಯಂತ್ರಣವನ್ನು ಕಳೆದುಕೊಂಡ ಒಂದು ದಿನದ ಬಳಿಕ ಮುಂಬೈನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜೊತೆ ಮೈತ್ರಿ ಮಾಡಿಕೊಂಡು ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಠಾಕ್ರೆ ಬಣವು ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿ, ಅವರನ್ನು ಅವಕಾಶವಾದಿ ಎಂದು ಕರೆದಿತ್ತು. ಅವರಿಗೆ ಯಾವುದೇ ತತ್ವ ಸಿದ್ಧಾಂತ ಮತ್ತು ನಿಲುವು ಇಲ್ಲ. ಅಧಿಕಾರ, ಹಣ ಮತ್ತು ಚುನಾವಣಾ ಆಯೋಗವನ್ನು ಸಹ ಕೈಗೊಂಬೆಗಳಾಗಿ ಇಳಿಸಿದರೆ, ಚುನಾವಣೆಯಲ್ಲಿ ಯಾವುದೇ ಅಲೆಯನ್ನು ಸೃಷ್ಟಿಸಬಹುದು, ಅಂತಹ ಅಲೆಗಳಿಗೆ ಯಾವುದೇ ಅರ್ಥವಿಲ್ಲ ಎಂದು ಶಿವಸೇನೆ (ಯುಬಿಟಿ) ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
ಬಿಜೆಪಿ ಬಗ್ಗೆ ಹೇಳುವುದಾದರೆ 89 ಸ್ಥಾನಗಳೊಂದಿಗೆ ಬಿಎಂಸಿಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ ಜೊತೆಗೆ, ಮಹಾಯುತಿ 118 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ ಬೇಕಾಗುವ 114 ಸ್ಥಾನಗಳಿಗಿಂತ ನಾಲ್ಕು ಹೆಚ್ಚು ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಬಿಎಂಸಿಯಲ್ಲಿ ಯುಬಿಟಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಎಂಎನ್ಎಸ್ ಸ್ಪರ್ಧಿಸಿದ 53 ಸ್ಥಾನಗಳಲ್ಲಿ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಶರದ್ ಪವಾರ್ ಬಣ ಕೇವಲ ಒಂದು ಸ್ಥಾನವನ್ನು ಗಳಿಸಿತು(ಏಜೆನ್ಸೀಸ್).