ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ ಯಶಸ್ವಿ ಪ್ರತಿಭಟನೆ ಬಳಿಕ ಶುಕ್ರವಾರ(ಆ. 21) ದೆಹಲಿಯ ಜಂತರ್ ಮಂತರ್ನಲ್ಲಿ ಮೀಸಲಾತಿ(Reservation) ಬಡವರಿಗಾಗಿ ಬೇಕು, ಜಾತಿಗಾಗಿ ಅಲ್ಲ ಎಂದು ಒತ್ತಾಯಿಸಿ ಮೀಸಲಾತಿ ಹಠಾವೋ ಆಂದಲೋಲನ ಹೆಸರಲ್ಲಿ ಭಾರಿ ಪ್ರತಿಭಟನೆ ನಡೆದಿದ್ದು, 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸಿಜೆಪಿ ಬಳಿಕ ಮೀಸಲಾತಿ ಹಠಾವೋ ಆಂದೋಲನ ಹೆಸರಲ್ಲಿ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಖಾತೆಯೊಂದು ಚಾಲ್ತಿಯಲ್ಲಿದ್ದು, 5.6 ಮಿಲಿಯನ್ ಫಾಲೋವರ್ಗಳನ್ನು ಹೊಂದಿದೆ. ಈ ಪೇಜ್ ನಿರ್ವಾಹಕರ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿ ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದತು.
ದಿನವಿಡೀ ನೂರಾರು ಜನರು ಅಲ್ಲಿ ಜಮಾಯಿಸಿದ್ದರೂ, ಸಂಜೆ 4 ಗಂಟೆಯ ಬಳಿಕ ಸಾವಿರಾರು ಜನ ಭಾಗವಹಿಸಿದ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು ಎನ್ನಲಾಗಿದೆ. ಕೇಸರಿ ಧ್ವಜಗಳನ್ನು ಹಿಡಿದಿದ್ದ ಅನೇಕ ಪ್ರತಿಭಟನಾಕಾರರು ಮೀಸಲಾತಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಪ್ರದರ್ಶಿಸುತ್ತಾ, ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರ ಅಗತ್ಯಗಳಿಗಾಗಿ ಸರ್ಕಾರ ಜಾತಿ ಆಧಾರದಲ್ಲಿ ನೆರವು ನೀಡಬಾರದು. ಬಡತನದ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
SC/ST(ದೌರ್ಜನ್ಯ ತಡೆ) ಕಾಯ್ದೆಯನ್ನು ಪ್ರತಿಭಟನಾಕಾರರು ವಿರೋಧಿಸಿದ್ದು, ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಮತ್ತು ಒಂದು ಕುಟುಂಬ, ಒಂದು ಮೀಸಲಾತಿ, ಒಂದು ಬಾರಿ ನೀತಿಯನ್ನು ಜಾರಿಗೊಳಿಸುವಂತೆ ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ. ಹಾಗೆಯೇ ಯುಜಿಸಿ ರೋಸ್ಟರ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದಿದ್ದಾರೆ (ಏಜೆನ್ಸೀಸ್).