ಹರಿದ ಪುಸ್ತಕದ ಹಾಳೆಗಳ ಮೇಲೆ ಊಟ ಮಾಡುತ್ತಿರುವ ಶಾಲಾ ಮಕ್ಕಳು
- ಹರಿದ ಪುಸ್ತಕಗಳ ಹಾಳೆಗಳ ಮೇಲೆ ಊಟ ಮಾಡಿದ ಸರ್ಕಾರಿ ಶಾಲೆ ಮಕ್ಕಳು
- ಗಣರಾಜ್ಯೋತ್ಸವದಂದು ನಡೆದ ಅಮಾನವೀಯ ಘಟನೆ
- ತಟ್ಟೆಗೆಂದು ಹಣ ಬಿಡುಗಡೆಯಾಗಿದ್ದರೂ, ಕೊಳಕು ಕಾಗದಲ್ಲಿ ಉಣಬಡಿಸಿದ ಶಾಲಾ ಸಿಬ್ಬಂದಿ
ಮಧ್ಯಪ್ರದೇಶ: ಜನವರಿ 26 ರಂದ ಭಾರತದಾದ್ಯಂತ ಗಣರಾಜ್ಯೋತ್ಸವ (Republic Day) ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದ ನಮ್ಮ ದೇಶದಲ್ಲಿ ಸಂವಿಧಾನಾತ್ಮಕ ಆಡಳಿತ ಆರಂಭವಾದ ಹಿನ್ನಲೆಯಲ್ಲಿ ಈ ದಿನ ಪ್ರತಿಯೊಬ್ಬ ಭಾರತೀಯನಿಗೆ ಮಹತ್ವದ ದಿನವಾಗಿದೆ.
ಗಣರಾಜ್ಯೋತ್ಸವ ಆಚರಣೆಯು ಮಕ್ಕಳಿಗೆ ಘನತೆ, ಸಮಾನತೆ ಮತ್ತು ಸಂವಿಧಾನದ ಬಗ್ಗೆ ಹೆಮ್ಮೆ ಮತ್ತು ಅರಿವನ್ನು ಕಲಿಸುವ ಉದ್ದೇಶವನ್ನು ಹೊಂದಿದೆ. ಆದರೆ ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ, ಆ ಪಾಠವನ್ನು ಹರಿದ ಪುಸ್ತಕಗಳ ಪುಟಗಳಲ್ಲಿ ನೀಡಲಾಗಿದೆ. ಭಟ್ಗವಾನ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಗಣರಾಜ್ಯೋತ್ಸವದ ವಿಶೇಷ ಮಧ್ಯಾಹ್ನದ ಊಟವನ್ನು ತಟ್ಟೆಗಳಲ್ಲಿ ನೀಡದೆ, ಬದಲಾಗಿ ಹಳೆಯ ಪುಸ್ತಕಗಳ ಹರಿದ ಕಾಗದದ ಮೇಲೆ ಉಣಬಡಿಸಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಜನವರಿ 26 ರಂದು ಸರ್ಕಾರದ ಸೂಚನೆಯ ಪ್ರಕಾರ ಪೂರಿ ಮತ್ತು ಹಲ್ವಾವನ್ನು ವಿಶೇಷ ಮಧ್ಯಾಹ್ನದ ಊಟದ ರೂಪದಲ್ಲಿ ತಯಾರಿಸಲಾಗಿದೆ. ನಂತರ ಮಕ್ಕಳನ್ನು ನೆಲದ ಮೇಲೆ ಕುಳಿಸಿ, ತಟ್ಟೆ ಅಥವಾ ಎಲೆಗಳ ಬದಲಿಗೆ, ಶಾಯಿಯಿಂದ ತುಂಬಿದ, ಕೊಳಕು ಕಾಗದದ ಹಾಳೆಗಳನ್ನು ಅವರ ಮುಂದೆ ಹರಡಿ ಅದರ ಮೇಲೆ ಆಹಾರವನ್ನು ಬಡಿಸಲಾಯಿತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ಲೇಟ್‌ಗಳನ್ನು ಖರೀದಿಸಲು ಈಗಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದ್ದರು ಸಹ ಗಣರಾಜ್ಯೋತ್ಸವದಂದು ಒಂದೇ ಒಂದು ಪ್ಲೇಟ್ ಕೂಡ ಕಾಣಿಸಲಿಲ್ಲ.
ಮುದ್ರಿತ ಅಥವಾ ಲಿಖಿತ ಕಾಗದದ ಮೇಲೆ ಆಹಾರವನ್ನು ಬಡಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುದ್ರಣ ಶಾಯಿಯಲ್ಲಿ ಸೀಸ ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಇರುತ್ತವೆ, ಬಿಸಿ ಆಹಾರವು ಇವುಗಳೊಂದಿಗೆ ಸೇರಿದರೆ ಆಹಾರ ವಿಷವಾಗಿ ಬದಲಾಗುತ್ತದೆ. ಇದು ಮಕ್ಕಳಲ್ಲಿ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಪೋಷಕರು ಮತ್ತು ಗ್ರಾಮಸ್ಥರಲ್ಲಿ ಕೋಪ,ನಾಚಿಕೆಯನ್ನು ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆಯ ಕಣ್ಗಾವಲಿನಲ್ಲಿ ಇಂತಹ ಘಟನೆ ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ ವಿಷ್ಣು ತ್ರಿಪಾಠಿ, ವೈರಲ್ ವೀಡಿಯೊ ತಮ್ಮ ಗಮನಕ್ಕೆ ಬಂದಿದೆ ಮತ್ತು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಬ್ಲಾಕ್ ಸಂಪನ್ಮೂಲ ಸಂಯೋಜಕರಿಗೆ (ಬಿಆರ್‌ಸಿ) ನಿರ್ದೇಶಿಸಿದ್ದೇನೆ ಎಂದು ಹೇಳಿದರು. ತನಿಖಾ ವರದಿಯ ಆಧಾರದ ಮೇಲೆ ಜವಾಬ್ದಾರಿಯುತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಆಡಳಿತಾರೂಢ ಬಿಜೆಪಿ ತನ್ನ 2023 ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಸುಧಾರಿಸುವ ಭರವಸೆ ನೀಡಿತ್ತು. ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಾಲಾ ಶಿಕ್ಷಣದಂತಹ ಇಲಾಖೆಗಳು ಊಟದ ಜೊತೆಗೆ ಸಮತೋಲಿತ ಪೋಷಣೆ ಮತ್ತು ಟೆಟ್ರಾ-ಪ್ಯಾಕ್ಡ್ ಹಾಲನ್ನು ಒದಗಿಸುವ ಪ್ರಸ್ತಾಪಗಳನ್ನು ಸಹ ಚರ್ಚಿಸಿದ್ದವು,(ಏಜನ್ಸೀಸ್).