- ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ
- ಗಡಿ ಪ್ರದೇಶಗಳಲ್ಲಿ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಎಚ್ಚರಿಕೆಯನ್ನು ನೀಡಿದೆ
- ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಡ್ರೋನ್ ಬಳಸಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಪೂರೈಸುವ ಪ್ರಕರಣಗಳು ಹೆಚ್ಚುತ್ತಿವೆ
- ಗಡಿಯುದ್ದಕ್ಕೂ ಹಾರಾಡುವ ಸಂಶಯಾಸ್ಪದ ಡ್ರೋನ್ಗಳನ್ನು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳಿಗೆ ಸೂಚನೆ
ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ (Republic Day) ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಗಡಿ ಪ್ರದೇಶಗಳಲ್ಲಿ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಎಚ್ಚರಿಕೆಯನ್ನು ನೀಡಿದೆ. ಇದು ಗಡಿಯಾಚೆಗಿನ ಸಂಭಾವ್ಯ ಬೆದರಿಕೆಗಳನ್ನು ಎದುರಿಸುವ ಹಿನ್ನಲೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ
ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಡ್ರೋನ್ ಬಳಸಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಪೂರೈಸುವ ಪ್ರಕರಣಗಳು ಹೆಚ್ಚುತ್ತಿವೆ. ಆದರಿಂದ ಗಡಿಯುದ್ದಕ್ಕೂ ಹಾರಾಡುವ ಸಂಶಯಾಸ್ಪದ ಡ್ರೋನ್ಗಳನ್ನು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳಿಗೆ ಕಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ವಿಶೇಷವಾಗಿ ಈ ಎಚ್ಚರಿಕೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದ ಗಡಿಗಳ ಮೇಲೆ ಕೇಂದ್ರೀಕರಿಸುತ್ತದೆ.
ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕರು ಕೇವಲ ಡ್ರೋನ್ಗಳ ಮೇಲೆ ಮಾತ್ರ ಅವಲಂಬಿತವಾಗದೇ, ರೇಡಾರ್ಗಳ ಕಣ್ಣುತಪ್ಪಿಸಲು ಪ್ಯಾರಾಗ್ಲೈಡರ್‌ಗಳು ಮತ್ತು ಹ್ಯಾಂಗ್ ಗ್ಲೈಡರ್‌ಗಳನ್ನು ಬಳಸಿ ಒಳನುಸುಳವ ಸಾಧ್ಯತೆ ಹೆಚ್ಚಿದೆ. ಆದಾಗ್ಯೂ, ಲಷ್ಕರ್-ಎ-ತೈಬಾ ಮತ್ತು ಕೆಲವು ಸಿಖ್ ಉಗ್ರಗಾಮಿ ಸಂಘಟನೆಗಳಂತಹ ಗುಂಪುಗಳು ದೊಡ್ಡ ಪ್ರಮಾಣದಲ್ಲಿ ಪ್ಯಾರಾಗ್ಲೈಡಿಂಗ್ ಉಪಕರಣಗಳು ಮತ್ತು ಸಂಬಂಧಿತ ಸಾಧನಗಳನ್ನು ಖರೀದಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಭದ್ರತಾ ಸಂಸ್ಥೆಗಳಿಗೆ ಗರಿಷ್ಠ ಜಾಗರೂಕತೆ ವಹಿಸಲು ಆದೇಶ!
ಭದ್ರತಾ ಪಡೆಗಳು ಸಂಪೂರ್ಣ ಜಾಗರೂಕರಾಗಿರುವಂತೆ ನಿರ್ದೇಶಿಸಲಾಗಿದ್ದು, ರೇಡಾರ್ಗಳಿಗೆ ಸಿಗದಂತಹ ಸಣ್ಣ ಹಾರುವ ವಸ್ತುಗಳನ್ನು ಪತ್ತೆ ಹಚ್ಚಲು ಗಡಿ ಭಾಗಗಳಲ್ಲಿ ಸಂವೇದಕಗಳು ಮತ್ತು ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಆಕಾಶದಲ್ಲಿ ಕಂಡುಬರುವ ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡು ಬಂದರೆ, ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಾಯುಪಡೆ ಮತ್ತು ಬಿಎಸ್ಎಫ್ಗೆ ತಿಳಿಸಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮವು ಕೇವಲ ಸೇನಾ ಶಕ್ತಿಯ ಪ್ರದರ್ಶನ ಮಾತ್ರವಲ್ಲದೆ, ತಾಂತ್ರಿಕ ಭದ್ರತೆಯ ಹೊಸ ಮೈಲಿಗಲ್ಲಿಗೂ ಸಾಕ್ಷಿಯಾಗಲಿದೆ. ದೇಶ ದ್ರೋಹದ ಕೃತ್ಯಗಳನ್ನು ತಡೆಯಲು ಪೊಲೀಸರು ಈ ಬಾರಿ AI-ಸಕ್ರಿಯಗೊಳಿಸಿದ ಸ್ಮಾರ್ಟ್ ಗ್ಲಾಸ್‌ಗಳನ್ನು ರಂಗಕ್ಕಿಳಿಸುತ್ತಿದ್ದಾರೆ.
ಇದು ಭಾರತೀಯ ಕಂಪನಿಯೊಂದು ತಯಾರಿಸಿದ ಸ್ಮಾರ್ಟ್ ಗ್ಲಾಸ್ಗಳಾಗಿದ್ದು, ಘೋಷಿತ ಅಪರಾಧಿಗಳು ಮತ್ತು ಶಂಕಿತರ ಪೊಲೀಸ್ ಡೇಟಾಬೇಸ್‌ಗೆ ನೈಜ ಸಮಯದಲ್ಲಿ ಲಿಂಕ್ ಮಾಡುತ್ತದೆ. ಇದು ನೆಲದ ಮೇಲಿನ ಸಿಬ್ಬಂದಿಗೆ ಜನದಟ್ಟಣೆಯ ಪ್ರದೇಶಗಳಲ್ಲಿ ವ್ಯಕ್ತಿಗಳನ್ನು ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).