Narowal Temple | ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ಮಂದಿರ ನೆಲಸಮಗೊಳಿಸಿದ್ದನ್ನು ಖಂಡಿಸಿದ ಭಾರತ 
ದೇಶ

ಈ ವಿಧ್ವಂಸಕ ಕೃತ್ಯಕ್ಕೆ ಕ್ಷಮೆಯೇ ಇಲ್ಲ!...ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ಮಂದಿರ ನೆಲಸಮಗೊಳಿಸಿದ್ದನ್ನು ಖಂಡಿಸಿದ ಭಾರತ | Narowal Temple

Narowal Temple: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ 100 ವರ್ಷಗಳಿಗೂ ಹೆಚ್ಚು ಹಳೆಯದಾದ ಐತಿಹಾಸಿಕ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಆಗಸ್ಟ್ 21ರಂದು ನಡೆದ ಈ ಕೃತ್ಯದ ಬಗ್ಗೆ ನವದೆಹಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ಗಂಡಾಂತರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ವಿಷಯದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣ್‌ಧೀರ್ ಜೈಸ್ವಾಲ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಅವರ ಧಾರ್ಮಿಕ ಸ್ವಾತಂತ್ರ್ಯವು ನಿರಂತರವಾಗಿ ಉಲ್ಲಂಘನೆಗೊಳಗಾಗುತ್ತಿರುವುದಕ್ಕೆ ಈ ಘಟನೆ ಒಂದು ಸ್ಪಷ್ಟ ನಿದರ್ಶನ ಎಂದು ತಿಳಿಸಿದ್ದಾರೆ. ಶತಮಾನ ಹಳೆಯದಾದ ಪೂಜಾ ಸ್ಥಳವನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಸರ್ಕಾರದ ಆಡಳಿತ ಯಂತ್ರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತದ ಬೇಡಿಕೆಗಳೇನು..?

ಪಾಕಿಸ್ತಾನ ಸರ್ಕಾರವು ಈ ಇಡೀ ಘಟನೆಯ ಕುರಿತು ಕೂಡಲೇ ಕಟ್ಟುನಿಟ್ಟಾದ ಮತ್ತು ಪಾರದರ್ಶಕ ತನಿಖೆಯನ್ನು ನಡೆಸಬೇಕು. ಈ ಅಶುದ್ಧ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಆರೋಪಿಯನ್ನು ಗುರುತಿಸಿ ಕಾನೂನಿನನ್ವಯ ಕಠಿಣ ಹೊಣೆಗಾರಿಕೆಗೆ ಒಳಪಡಿಸಬೇಕು ಎಂದು ಭಾರತ ಒತ್ತಾಯಿಸಿದೆ. ಇದರೊಂದಿಗೆ, ಧ್ವಂಸಗೊಂಡಿರುವ ಈ ಪವಿತ್ರ ದೇವಾಲಯವನ್ನು ಕೂಡಲೇ ಪುನರ್‌ನಿರ್ಮಿಸಬೇಕು ಹಾಗೂ ದೇಶದ ಪ್ರತಿಯೊಬ್ಬ ಅಲ್ಪಸಂಖ್ಯಾತ ನಾಗರಿಕನ ಜೀವ, ಸುರಕ್ಷತೆ ಮತ್ತು ಅವರ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ತಮ್ಮ ಪ್ರಾಥಮಿಕ ಸಾಂವಿಧಾನಿಕ ಜವಾಬ್ದಾರಿಯನ್ನು ಪಾಕಿಸ್ತಾನ ಸರ್ಕಾರವು ಈ ಕೂಡಲೇ ಈಡೇರಿಸಬೇಕು ಎಂದು ನವದೆಹಲಿ ಆಗ್ರಹಿಸಿದೆ.

ಘಟನೆಯ ಹಿನ್ನೆಲೆ: ಸ್ಥಳೀಯರ ಆರೋಪಗಳೇನು..?

ಸ್ಥಳೀಯರ ಮಾಹಿತಿಯ ಪ್ರಕಾರ, ನಿಷೇಧಿತ ಉಗ್ರ ಸಂಘಟನೆಯಾದ ತೆಹ್ರಿಕ್-ಇ-ಲಬ್ಬಾಯ್ಕ್ ಪಾಕಿಸ್ತಾನದ (TLP) ಕೆಲ ಕಟ್ಟಾ ಮೂಲಭೂತವಾದಿಗಳು ಈ ದೇವಾಲಯವನ್ನು ನೆಲಸಮಗೊಳಿಸಿದ್ದಾರೆ. ಮಂದಿರವಿದ್ದ ಜಾಗವನ್ನು ಪಕ್ಕದಲ್ಲೇ ಇರುವ ಧಾರ್ಮಿಕ ಶಿಕ್ಷಣ ಸಂಸ್ಥೆಗೆ (ಮದರಸಾ) ಸೇರಿಸಿಕೊಳ್ಳುವ ದುರದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ದೇವಾಲಯದ ಶಿಖರದ ಮೇಲಿನ ಲೋಹದ ಪರಿಕರಗಳು, ಕಿತ್ತುಹಾಕಿದ ಇಟ್ಟಿಗೆಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಸ್ಥಳದಿಂದ ಸಾಗಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ್ ಮಸಿಹಾ ಮಿಲತ್ ಪಾರ್ಟಿ (PMMP) ಕೂಡ ಈ ಕೃತ್ಯವನ್ನು ಖಂಡಿಸಿದ್ದು, ಪಕ್ಷದ ಅಧ್ಯಕ್ಷ ಅಸ್ಲಮ್ ಪರ್ವೇಜ್ ಸಾಹೋತ್ರಾ ಅವರು ಆಗಸ್ಟ್ 28ರಂದು ಪಂಜಾಬ್ ಪ್ರಾಂತ್ಯದ ಹೆಚ್ಚುವರಿ ಗೃಹ ಕಾರ್ಯದರ್ಶಿಯನ್ನು ನೇರವಾಗಿ ಭೇಟಿಯಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಅಪರಾಧಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಮಂದಿರವನ್ನು ಮರುನಿರ್ಮಾಣ ಮಾಡಬೇಕು ಎಂದು ಅವರು ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.
ಇತಿಹಾಸದ ಪುಟಗಳನ್ನು ತಿರುಗಿ ನೋಡಿದರೆ, ಪಾಕಿಸ್ತಾನ ರೂಪುಗೊಂಡ ಆರಂಭದ ದಿನಗಳಲ್ಲಿ ಕೇವಲ ನರೋವಾಲ್ ಜಿಲ್ಲೆಯೊಂದರಲ್ಲೇ ಒಟ್ಟು 45 ಹಿಂದೂ ದೇವಾಲಯಗಳಿದ್ದವು. ಆದರೆ ಆಡಳಿತ ವ್ಯವಸ್ಥೆಯ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ದಬ್ಬಾಳಿಕೆಯಿಂದಾಗಿ ಕಾಲಕ್ರಮೇಣ ಆ ಎಲ್ಲ ದೇವಾಲಯಗಳು ಶಿಥಿಲಗೊಂಡು ಇಂದು ಸಂಪೂರ್ಣವಾಗಿ ನಾಶವಾಗಿವೆ ಅಥವಾ ಅಸ್ತಿತ್ವ ಕಳೆದುಕೊಂಡಿವೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ರಕ್ಷಣೆಯಲ್ಲಿ ಪಾಕಿಸ್ತಾನ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಈ ದೇವಾಲಯದ ಧ್ವಂಸವು ಮತ್ತೊಮ್ಮೆ ಸಾಕ್ಷಿಯಾಗಿದೆ(ಏಜೆನ್ಸೀಸ್​).