Re Polling | ಆ 15 ಬೂತ್​ಗಳಲ್ಲಿ ಇಂದು ಹಣೆಬರಹ ರೀ-ರೈಟ್ ಮಾಡಲಿದ್ದಾನೆ ಮತದಾರ! 
ದೇಶ

2026ರ ಪಂಚರಾಜ್ಯ ಚುನಾವಣೆಯಲ್ಲೇ ಇದೇ ಮೊದಲು... ಆ 15 ಬೂತ್​ಗಳಲ್ಲಿ ಇಂದು ಹಣೆಬರಹ ರೀ-ರೈಟ್ ಮಾಡಲಿದ್ದಾನೆ ಮತದಾರ! | Re Polling

Re Polling: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಎರಡು ಪ್ರಮುಖ ಕ್ಷೇತ್ರಗಳ ಆಯ್ದ ಭಾಗಗಳಲ್ಲಿ ಇಂದು ಮರು ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮೇ 2ರ ಶನಿವಾರದಂದು ಮಗ್ರಹತ್ ಪಶ್ಚಿಮ ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರಗಳ ಒಟ್ಟು 15 ಮತಗಟ್ಟೆಗಳಲ್ಲಿ ಹೊಸದಾಗಿ ಮತದಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
ಈ ಎರಡು ಕ್ಷೇತ್ರಗಳಲ್ಲಿ ಮತದಾನದ ವೇಳೆ ಕಂಡುಬಂದ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪದೋಷಗಳ ಕುರಿತು ರಾಜ್ಯ ಚುನಾವಣಾಧಿಕಾರಿಗಳು ನೀಡಿದ ವರದಿಯನ್ನು ಆಧರಿಸಿ ಆಯೋಗವು ಈ ನಿರ್ಧಾರ ಕೈಗೊಂಡಿದೆ.

ಮತಗಟ್ಟೆಗಳ ವಿವರ

ಪ್ರಸ್ತುತ ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಪೈಕಿ ಮರು ಮತದಾನಕ್ಕೆ ಆದೇಶಿಸಿರುವುದು ಇದೇ ಮೊದಲ ಬಾರಿಯಾಗಿದೆ. ಮಗ್ರಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಯಾರ್ಪುರ್ ಎಫ್‌ಪಿ ಶಾಲೆ, ನಜ್ರಾ ಎಫ್‌ಪಿ ಶಾಲೆ, ಡ್ಯೂಲಾ ಎಫ್‌ಪಿ ಶಾಲೆ, ಘೋಲಾ ನಯಾಪರ ಗರ್ಲ್ಸ್ ಹೈ ಮದರಸಾ ಹಾಗೂ ಏಕ್ತಾರ ಮಲಯ ಮತ್ತು ಬಹಿರ್‌ಪುರ್ ಕುರ್ಕುರಿಯಾದ ವಿವಿಧ ಕೊಠಡಿಗಳು ಸೇರಿದಂತೆ ಒಟ್ಟು 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ. ಅದೇ ರೀತಿ ಡೈಮಂಡ್ ಹಾರ್ಬರ್ ಕ್ಷೇತ್ರದ ಬಾಗ್ಡಾ ಜೂನಿಯರ್ ಹೈಸ್ಕೂಲ್, ಚಂದಾ ಎಫ್‌ಪಿ ಶಾಲೆ, ಹಂಡೇಪುರ್ ಮತ್ತು ರಾಯನಗರ ಎಫ್‌ಪಿ ಶಾಲೆಗಳ ನಾಲ್ಕು ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಈ ಪ್ರಕ್ರಿಯೆಯು ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲು ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸಂಬಂಧಿತ ಪ್ರದೇಶಗಳಲ್ಲಿ ಡೋಲು ಬಾರಿಸುವ ಮೂಲಕ ಹಾಗೂ ಸಾಂಪ್ರದಾಯಿಕ ಪ್ರಚಾರದ ವಿಧಾನಗಳನ್ನು ಬಳಸಿ ಮತದಾರರಿಗೆ ಅರಿವು ಮೂಡಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ.
ಇದರೊಂದಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಲಿಖಿತವಾಗಿ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಈ ಕೇಂದ್ರಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಚುನಾವಣಾ ವೀಕ್ಷಕರು ಸಂಪೂರ್ಣ ಪ್ರಕ್ರಿಯೆಯ ಮೇಲೆ ನಿಗಾ ಇರಿಸಿದ್ದಾರೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಈಗಾಗಲೇ ಎರಡು ಹಂತಗಳಲ್ಲಿ ಪೂರ್ಣಗೊಂಡಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

ಅಭ್ಯರ್ಥಿಗಳು ಇವರೇ ನೋಡಿ!

ಈ ಮರು ಮತದಾನವು ಅಭ್ಯರ್ಥಿಗಳ ಪಾಲಿಗೆ ಅತಿ ಮುಖ್ಯವಾಗಿದೆ. ಮಗ್ರಹತ್ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಗೌರಸುಂದರ್ ಘೋಷ್ ಮತ್ತು ತೃಣಮೂಲ ಕಾಂಗ್ರೆಸ್ (TMC) ಪರವಾಗಿ ಸಮೀಮ್ ಅಹ್ಮದ್ ಅವರ ನಡುವೆ ನೇರ ಹಣಾಹಣಿ ಇದೆ. ಇತ್ತ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ದೀಪಕ್ ಕುಮಾರ್ ಹಲ್ದರ್ ಕಣದಲ್ಲಿದ್ದರೆ, ಟಿಎಂಸಿಯಿಂದ ಪನ್ನಾಲಾಲ್ ಹಲ್ದರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಮರು ಮತದಾನದ ಪ್ರಕ್ರಿಯೆಯು ಈ ನಾಯಕರ ಗೆಲುವಿನ ಲೆಕ್ಕಾಚಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ.(ಏಜೆನ್ಸೀಸ್​​).