ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗೀಳ್
- ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ವಿಧಿವಶ
- ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಗಾಡ್ಗೀಳ್
- ಪಶ್ಚಿಮ ಘಟ್ಟಗಳ ಪರಿಸರ ಮಹತ್ವ ತಿಳಿಸುವಲ್ಲಿ ಗಾಡ್ಗೀಳ್ ನೀಡಿದ ಸೇವೆ ಅನನ್ಯ
- ಇಂದು (ಜ.08) ಸಂಜೆ 4 ಗಂಟೆಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ
ಪುಣೆ: ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ( Madhav Gadgil ) ಅವರು ನಿನ್ನೆ (ಜ.07) ತಡರಾತ್ರಿ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಡ್ಗೀಳ್ ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮಾಧವ್ ಗಾಡ್ಗೀಳ್ ಅವರ ಅಂತ್ಯಕ್ರಿಯೆ ಇಂದು (ಜ.08) ಸಂಜೆ 4 ಗಂಟೆಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಪಶ್ಚಿಮ ಘಟ್ಟಗಳ ಪರಿಸರ ಮಹತ್ವವನ್ನು ತಿಳಿಸುವಲ್ಲಿ ಗಾಡ್ಗೀಳ್ ಅವರು ನೀಡಿದಂತಹ ಸೇವೆಗಾಗಿ ಹೆಸರುವಾಸಿಯಾಗಿದ್ದರು. ಅಲ್ಲದೆ, ಜಾಗತಿಕ ಜೀವವೈವಿಧ್ಯ ತಾಣವಾದ ಪಶ್ಚಿಮ ಘಟ್ಟಗಳಲ್ಲಿ ಅವರು ಮಾಡಿದ ಪ್ರಮುಖ ಕೆಲಸಗಳನ್ನು ಗುರುತಿಸಿದ ವಿಶ್ವಸಂಸ್ಥೆ, 2024ರಲ್ಲಿ, ಅತ್ಯುನ್ನತ ಪರಿಸರ ಗೌರವವಾದ ವಾರ್ಷಿಕ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ನೀಡಿತು.
ಗಾಡ್ಗೀಳ್ ಅವರು ನೀಡಿದ ವರದಿಯು ಹೆಚ್ಚು ಸೂಕ್ಷ್ಮ ಎಂದು ವರ್ಗೀಕರಿಸಲಾದ ಅರಣ್ಯ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳಿಗೆ ಸಾಕಷ್ಟು ಶಿಫಾರಸುಗಳನ್ನು ಮಾಡಿತು. ಅರಣ್ಯ ಪ್ರದೇಶದಲ್ಲಿ ಯಾವುದೇ ಹೊಸ ರಸ್ತೆಗಳು ಅಥವಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಮತ್ತು ಕಡಿದಾದ ಇಳಿಜಾರುಗಳಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡಬಾರದು ಮತ್ತು ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ವರದಿ ಶಿಫಾರಸು ಮಾಡಿತ್ತು.
ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (WGEEP) ಮುಖ್ಯಸ್ಥರಾಗಿ ಗಾಡ್ಗೀಳ್ ಅವರು ಮಾಡಿದ ಕೆಲಸವು ಇಂದಿಗೂ ಜನಜನಿತ. ಅವರ ಸೇವೆಯಿಂದಲೇ ಪರಿಸರ ತಾಣವಾಗಿ ಪಶ್ಚಿಮ ಘಟ್ಟಗಳ ಮಹತ್ವ ಏನು ಮತ್ತು ಅದನ್ನು ಸಂರಕ್ಷಣೆ ಏಕೆ ಮುಖ್ಯ ಎಂಬ ಚರ್ಚೆ ಹುಟ್ಟಿಕೊಂಡಿತು.
ಮಾಧವ್ ಗಾಡ್ಗೀಳ್ ಅವರು ಓರ್ವ ಬರಹಗಾರ, ಸಂಶೋಧಕ ಮತ್ತು ಅಂಕಣಕಾರರಾಗಿದ್ದು, 1983 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಅಡಿಯಲ್ಲಿ ಪರಿಸರ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಿದರು. ಅವರು ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗಾಡ್ಗೀಳ್ ಅವರು ಓರ್ವ ಮಗ, ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಕಳೆದ ವರ್ಷ ನಿಧನರಾದರು. ಅವರ ತಂದೆ ಧನಂಜಯ್ ಗಾಡ್ಗೀಳ್ ಅವರು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಮತ್ತು ಭಾರತದ ಈ ಹಿಂದಿನ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು, (ಏಜೆನ್ಸೀಸ್).