Shashi Tharoor | ಕಾಂಗ್ರೆಸ್​ ಸಂಸದ ಶಶಿ ತರೂರ್ 
ದೇಶ

Shashi Tharoor | ಗಾಂಧಿ ಹೆಸರನ್ನು ತೆಗೆದುಹಾಕುವುದು ಅನೈತಿಕ; ಕೇಂದ್ರದ MNREGA ಮರುನಾಮಕರಣ ನಿರ್ಧಾರದ ವಿರುದ್ಧ ಶಶಿ ತರೂರ್ ವಾಗ್ದಾಳಿ

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಅನೈತಿಕ ಎಂದು ಕಾಂಗ್ರೆಸ್​ ಸಂಸದ ಶಶಿ ತರೂರ್(Shashi Tharoor) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ MNREGA ವನ್ನು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್‌ಗಾಗಿ ವಿಕ್ಷಿತ್ ಭಾರತ್ ಗ್ಯಾರಂಟಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರುವ ಕ್ರಮವನ್ನು ಶಶಿ ತರೂರ್​ ವಿರೋಧಿಸಿದ್ದಾರೆ.

ಗಾಂಧಿ ಹೆಸರನ್ನು ತೆಗೆದುಹಾಕುವುದು ತಪ್ಪು - ತರೂರ್

ಈ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಶಶಿ ತರೂರ್, ಗ್ರಾಮೀಣ ಕಾರ್ಮಿಕರನ್ನು ಬೆಂಬಲಿಸುವ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ಅನೈತಿಕ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಗಾಂಧಿಯವರ ಸ್ವಾವಲಂಬಿ ಗ್ರಾಮಗಳು ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನವು ಉದ್ಯೋಗ ಖಾತರಿ ಕಾರ್ಯಕ್ರಮಕ್ಕೆ ಆಳವಾಗಿ ಸಂಬಂಧಿಸಿದೆ. ಈ ಯೋಜನೆಯ ಚೈತನ್ಯವನ್ನು ದುರ್ಬಲಗೊಳಿಸುವ ಕ್ರಮಕ್ಕೆ ರಾಮನ ಹೆಸರನ್ನು ಕೆಣಕಬೇಡಿ ಎಂದು ತರೂರ್​ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹೊಸ ಮಸೂದೆಯ ಆರ್ಥಿಕ ರಚನೆಯ ಬಗ್ಗೆಯೂ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಸ್ತಾವಿತ ಯೋಜನೆಯು 25 ಹೆಚ್ಚುವರಿ ದಿನಗಳ ವೇತನದ ಕೆಲಸವನ್ನು ಭರವಸೆ ನೀಡಿದರೆ, ಅದು ವೆಚ್ಚದ 40 ಪ್ರತಿಶತವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುತ್ತದೆ. ಈ ಬದಲಾವಣೆಯು ಬಡ ರಾಜ್ಯಗಳ ಮೇಲೆ ಭಾರೀ ಒತ್ತಡವನ್ನು ಉಂಟು ಮಾಡುತ್ತದೆ. ಇದು ವೇತನ ಪಾವತಿಗಳಲ್ಲಿ ವಿಳಂಬ ಮತ್ತು ಕಡಿಮೆ ಕೆಲಸದ ದಿನಗಳಿಗೆ ಕಾರಣವಾಗುತ್ತದೆ ಎಂದು ತರೂರ್ ಎಚ್ಚರಿಸಿದ್ದಾರೆ. ಈ ಕ್ರಮವು ಅಂತಿಮವಾಗಿ ಕಾರ್ಯಕ್ರಮವನ್ನು ಕಾರ್ಯಸಾಧ್ಯವಾಗದಂತೆ ಮಾಡಬಹುದು.
ಈ ಪ್ರಸ್ತಾವನೆಯು ಹಣಕಾಸಿನ ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿದೆ. ಈ ಯೋಜನೆಯನ್ನು ಕಾರ್ಯಾಂಗದ ಅನುಮೋದನೆಯ ಮೇಲೆ ಅವಲಂಬಿತವಾಗಿಸುವ ಮೂಲಕ ಕೇಂದ್ರವು ಯಾವಾಗ ಮತ್ತು ಎಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಅವಕಾಶ ನೀಡುತ್ತದೆ. ಅಲ್ಲದೆ, ಉದ್ಯೋಗವನ್ನು ಹಕ್ಕಾಗಿ ಖಾತರಿಪಡಿಸುವ ಕಾನೂನಿನ ಸ್ವರೂಪವನ್ನೇ ಬದಲಾಯಿಸುತ್ತದೆ ಎಂದು ತರೂರ್ ಹೇಳಿದ್ದಾರೆ.

ಯೋಜನೆ ಬದಲಾವಣೆ ಬೇಡ: ಸಂಸದೆ ಪ್ರಿಯಾಂಕಾ ಗಾಂಧಿ ಟೀಕೆ

ಇಂದು ಲೋಕಸಭೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಜಿ ರಾಮ್ ಜಿ ಮಸೂದೆ ಎಂದೂ ಕರೆಯಲ್ಪಡುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆಯನ್ನು ಮಂಡಿಸಲು ಅನುಮತಿ ಕೋರಿದ್ದು, ಈ ಖಾಯ್ದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಇದೇ ವಿಷಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, ಯಾರದೋ ಹುಚ್ಚಾಟ, ಮಹತ್ವಾಕಾಂಕ್ಷೆ ಮತ್ತು ಪೂರ್ವಾಗ್ರಹದ ಆಧಾರದ ಮೇಲೆ ಯಾವುದೇ ಕಾನೂನನ್ನು ಅಂಗೀಕರಿಸಬಾರದು ಎಂದರು.
ಲೋಕಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 72(1) ರ ಅಡಿಯಲ್ಲಿ ಪ್ರಿಯಾಂಕಾ ಗಾಂಧಿ ಈ ಹೊಸ ಮಸೂದೆಯನ್ನು ವಿರೋಧಿಸಿದರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಭಾರತದ ಹಳ್ಳಿಗಳ ಜನರ ಜೀವನೋಪಾಯವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ 20 ವರ್ಷಗಳಿಂದ ಯಶಸ್ವಿಯಾಗಿದೆ. ಇದು ಎಷ್ಟು ಕ್ರಾಂತಿಕಾರಿ ಕಾನೂನೆಂದರೆ, ಇದನ್ನು ತಂದಾಗ, ಸಂಸತ್ತಿನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಬೆಂಬಲಿಸಿದವು. ಇದು ಈ ದೇಶದ ಬಡವರಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ ಎಂದು ಹೇಳಿದರು,(ಏಜೆನ್ಸೀಸ್).