ಐಪಿಎಲ್‌ನಿಂದ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಕಿತ್ತೊಗೆಯಿರಿ! ಈ 3 ಹೊಸ ನಿಯಮಗಳನ್ನು ಜಾರಿಗೆ ತನ್ನಿ ಎಂದ ಕ್ರಿಕೆಟ್ ದೇವರು!
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬೌಲರ್‌ಗಳನ್ನು ಮಶೀನ್‌ಗಳಂತೆ ದಂಡಿಸಿ, ಪ್ರತಿ ಪಂದ್ಯದಲ್ಲೂ 200 ಪ್ಲಸ್ ರನ್‌ಗಳ ಬಿಟ್ಟುಕೊಡುತ್ತಿರುವುದು ಕ್ರಿಕೆಟ್‌ಗೆ ವಿರುದ್ಧ ಎಂದು ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಹೇಳಿದ್ದಾರೆ.
ಈ ಬಗ್ಗೆ ಮುಂಬೈನಲ್ಲಿ ನಡೆದ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಕ್ತವಾಗಿ ಮಾತನಾಡಿದ ಸಚಿನ್, ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್ ಹಾಗೂ ಬೌಲರ್‌ಗಳ ನಡುವಿನ ಸಮಾನತೆಯನ್ನು ಮರಳಿ ತರಲು ಐಪಿಎಲ್‌ನ ಪ್ರಸ್ತುತ ನಿಯಮಗಳಿಗೆ ಕಠಿಣ ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಬೌಲರ್‌ಗಳ ಪಾಲಿಗೆ ಯಮನಾಗಿ ಪರಿಣಮಿಸಿರುವ ವಿವಾದಾತ್ಮಕ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್‌ನಿಂದ ಶಾಶ್ವತವಾಗಿ ಕಿತ್ತೊಗೆಯಬೇಕು ಎಂದು ಬಿಸಿಸಿಐಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ದೇಶದ ಕ್ರಿಕೆಟ್‌ಗೆ ಮಾರಕ!- ಸಚಿನ್
ಐಪಿಎಲ್ನಲ್ಲಿ ಬ್ಯಾಟಿಂಗ್‌ಗೆ ಮಾತ್ರ ಮಿತಿಮೀರಿದ ಆದ್ಯತೆ ಸಿಗುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಮಾಸ್ಟರ್ ಬ್ಲಾಸ್ಟರ್, ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇನ್ನು ಮುಂದೆ ಕ್ರಿಕೆಟ್‌ನಲ್ಲಿ ಇರಬಾರದು. ಅಲ್ಲದೆ, ಟಿ20 ಮಾದರಿಯಲ್ಲಿ ಆಡುವುದೇ ಕೇವಲ 20 ಓವರ್‌ಗಳು. ಅದರಲ್ಲೂ ನೀವು ಹೆಚ್ಚುವರಿಯಾಗಿ ಮತ್ತೊಬ್ಬ ಬ್ಯಾಟರ್ ಅನ್ನು ಮೈದಾನಕ್ಕೆ ಇಳಿಸಿದರೆ ಬೌಲರ್‌ಗಳ ಕಥೆ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಬೌಲರ್‌ಗಳು ತುಂಬಾ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಈ ನಿಯಮ ಕ್ರೀಡೆಯ ಸಮತೋಲನವನ್ನೇ ಧೂಳೀಪಟ ಮಾಡಿದೆ ಎಂದು ಸಚಿನ್ ಕಳವಳ ವ್ಯಕ್ತಪಡಿಸಿದ್ದಾರೆ.
ಪವರ್‌ಪ್ಲೇ ವಿಭಜನೆ ಮತ್ತು ಅತ್ಯುತ್ತಮ ಬೌಲರ್‌ಗೆ 5 ಓವರ್ ನೀಡಿ!
ಬೌಲರ್‌ಗಳಿಗೆ ಶಕ್ತಿ ತುಂಬಲು ಸಚಿನ್ ತೆಂಡೂಲ್ಕರ್ ಮಂಡಿಸಿರುವ ಉಳಿದೆರಡು ಕ್ರಾಂತಿಕಾರಿ ಸುಧಾರಣೆಗಳು ಇಡೀ ವಿಶ್ವ ಕ್ರಿಕೆಟ್ ಮಂಡಳಿಯನ್ನು ಚಿಂತನೆಗೆ ಹಚ್ಚಿವೆ.
ಪವರ್‌ಪ್ಲೇ ವಿಭಜನೆ: ಪ್ರಸ್ತುತ ಇರುವ ಆರಂಭಿಕ 6 ಓವರ್‌ಗಳ ಪವರ್‌ಪ್ಲೇ ನಿಯಮವನ್ನು ಬದಲಿಸಬೇಕು. ಅಲ್ಲದೆ, ಮೊದಲ 4 ಓವರ್‌ಗಳನ್ನು ಮಾತ್ರ ಬ್ಯಾಟರ್‌ಗಳ ಪವರ್‌ಪ್ಲೇ ಆಗಿ ಇಡಬೇಕು. ಉಳಿದ 2 ಓವರ್‌ಗಳ ಪವರ್‌ಪ್ಲೇ ಅನ್ನು ಬೌಲಿಂಗ್ ಮಾಡುವ ತಂಡದ ನಾಯಕ ತನಗೆ ಬೇಕಾದಾಗ ಬಳಸಿಕೊಳ್ಳಲು ಮುಕ್ತ ಅವಕಾಶ ನೀಡಬೇಕು. ಆ ಎರಡು ಓವರ್‌ಗಳಲ್ಲಿ ಮೈದಾನದ ಹೊರಗೆ ಒಬ್ಬ ಹೆಚ್ಚುವರಿ ಫೀಲ್ಡರ್‌ಗೆ ಅನುಮತಿ ನೀಡಬೇಕು ಎಂದಿದ್ದಾರೆ.
ಬೆಸ್ಟ್ ಬೌಲರ್‌ಗೆ 5 ಓವರ್: ಪ್ರಸ್ತುತ ಒಬ್ಬ ಬೌಲರ್ ಗರಿಷ್ಠ 4 ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಬಹುದು. ಆದರೆ ಸಚಿನ್ ಹೊಸ ಪ್ಲಾನ್ ನೀಡಿದ್ದು, ತಂಡದ ಅತ್ಯುತ್ತಮ ಬೌಲರ್‌ಗೆ 5 ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಬೇಕು ಎಂದಿದ್ದಾರೆ. ಉನ್ನತ ಬ್ಯಾಟರ್‌ಗಳು ಇಡೀ 20 ಓವರ್ ಬ್ಯಾಟಿಂಗ್ ಮಾಡುವಾಗ, ತಂಡದ ಬೆಸ್ಟ್ ಬೌಲರ್ ಯಾಕೆ 5 ಓವರ್ ಬೌಲಿಂಗ್ ಮಾಡಬಾರದು ಎಂದಿದ್ದಾರೆ. ಅಲ್ಲದೆ, ಅಭಿಮಾನಿಗಳಿಗೂ ಶ್ರೇಷ್ಠ ಬೌಲರ್‌ನ ಭೀಕರ ದಾಳಿಯನ್ನು ಹೆಚ್ಚು ನೋಡುವ ಆಸೆ ಇರುತ್ತದೆ ಎಂದು ಸಚಿನ್ ಪ್ರತಿಪಾದಿಸಿದ್ದಾರೆ.
ಐಪಿಎಲ್ 2026 ರಲ್ಲಿ ಬೌಲರ್‌ಗಳು ಬಲಿಯಾಗುತ್ತಿರುವುದನ್ನು ತಡೆಯಲು ಕ್ರಿಕೆಟ್ ಸಾಮ್ರಾಟ ಸಚಿನ್ ನೀಡಿರುವ ಈ ಸಲಹೆಗಳು ಮುಂಬರುವ ದಿನಗಳಲ್ಲಿ ಬಿಸಿಸಿಐ ಮತ್ತು ಐಸಿಸಿ ನಿಯಮಾವಳಿಗಳಲ್ಲಿ ಭಾರಿ ಬದಲಾವಣೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ,(ಏಜೆನ್ಸೀಸ್).