Nagesh Patil Ashtikar | ಉದ್ಧವ್ ಬಣ ತೊರೆಯಲು ಕಾರಣ ಬಿಚ್ಚಿಟ್ಟ ರೆಬೆಲ್ ಸಂಸದ ನಾಗೇಶ್ ಪಾಟೀಲ್ ಅಷ್ಟೀಕರ್
ಮುಂಬೈ: ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದ ನಾಗೇಶ್ ಪಾಟೀಲ್ ಅಷ್ಟೀಕರ್ (Nagesh Patil Ashtikar), ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದನ್ನು ಭಾನುವಾರ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಜೂನ್ 18ರ ನಂತರ ತಮ್ಮ ವಿರುದ್ಧ ಪಕ್ಷದಲ್ಲಿ ಕೇಳಿಬಂದ ಕೆಲವು ಆಕ್ಷೇಪಾರ್ಹ ಹೇಳಿಕೆಗಳೇ ತಾವು ಉದ್ಧವ್ ಠಾಕ್ರೆ ಬಣವನ್ನು ತೊರೆಯಲು ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.
ಹಿಂಗೋಲಿ ಕ್ಷೇತ್ರದ ಸಂಸದರಾಗಿರುವ ಅಷ್ಟೀಕರ್, ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಅನುದಾನದ ಕೊರತೆ ಮತ್ತು ವಿರೋಧ ಪಕ್ಷದಲ್ಲಿ ಇರುವುದರಿಂದ ಉಂಟಾಗುವ ಮಿತಿಗಳೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆಪರೇಷನ್ ಟೈಗರ್ ವದಂತಿಗಳ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ನಿಲುವನ್ನು ತಿಳಿಸಿದ್ದಾರೆ.
ನಾನು ಮತ್ತು ಕೆಲವು ಸಂಸದರು ಜೂನ್ 18ರವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ, ಎಲ್ಲೂ ಹೋಗಿರಲಿಲ್ಲ. ಆದರೆ, ಕಳೆದ ಗುರುವಾರದಿಂದ ನಮ್ಮ ವಿರುದ್ಧ ಪಕ್ಷದಲ್ಲಿ ಹಗುರವಾದ ಮಾತುಗಳನ್ನಾಡಲಾಯಿತು. ಇದರಿಂದಾಗಿ ಇನ್ನು ಮುಂದೆ ಈ ಪಕ್ಷದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಮಗೆ ಅನಿಸಿತು. ನಮಗೆ ಉದ್ಧವ್ ಠಾಕ್ರೆ ಅವರ ಮೇಲಾಗಲಿ ಅಥವಾ ನಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಂಜಯ್ ರಾವತ್ ಮೇಲಾಗಲಿ ವೈಯಕ್ತಿಕವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಅಷ್ಟೀಕರ್ ಸ್ಪಷ್ಟಪಡಿಸಿದ್ದಾರೆ.
ಅನುದಾನದ ಕೊರತೆಯೇ ದೊಡ್ಡ ಕಾರಣ!..
ನಾವು ಅಧಿಕಾರದಲ್ಲಿ ಇಲ್ಲದ ಕಾರಣ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ. ಜನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟು ಗೆಲ್ಲಿಸಿದ್ದಾರೆ. ಆದರೆ ನನಗೆ ಯಾವುದೇ ಅಭಿವೃದ್ಧಿ ಅನುದಾನ ಸಿಗುತ್ತಿರಲಿಲ್ಲ. ಕೇವಲ 5 ಕೋಟಿ ರೂಪಾಯಿಗಳ ಎಂಪಿಎಲ್‌ಎಡಿ (MPLAD) ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸಿದರೂ ಹಿಂಗೋಲಿ ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗಲಿಲ್ಲ. ಹಾಗಾಗಿ ಜನರಿಗಾಗಿ ನಾನು ಈ ಹೆಜ್ಜೆ ಇಟ್ಟಿದ್ದೇನೆ, ನನ್ನ ಈ ಪರಿಸ್ಥಿತಿಯನ್ನು ಪಕ್ಷದ ನಾಯಕರು ಮುಂದೆ ಅರ್ಥಮಾಡಿಕೊಳ್ಳುತ್ತಾರೆ ಎಂದು ಅಷ್ಟೀಕರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಿದ್ಧಾಂತದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದಿರುವ ನಾಗೇಶ್ ಪಾಟೀಲ್ ಅಷ್ಟೀಕರ್, ನಾನು ಬೇರೆಲ್ಲೂ ಹೋಗಿಲ್ಲ, ಕೇವಲ ಶಿವಸೇನೆಯಿಂದ ಮತ್ತೊಂದು ಶಿವಸೇನೆಗೆ ಹೋಗಿದ್ದೇನೆ, ಅಷ್ಟೇ ಎಂದಿದ್ದಾರೆ. ಬಂಡಾಯಗಾರರ ವಿರುದ್ಧ ಸಂಜಯ್ ರಾವತ್ ನೀಡಿದ್ದ ಆಪರೇಷನ್ ತುಡ್ವಾ (ಕಾರ್ಯಕರ್ತರಿಂದ ಆಕ್ರೋಶ) ಎಚ್ಚರಿಕೆಗೆ ತಿರುಗೇಟು ನೀಡಿದ ಅವರು, ರಾವತ್ ಅವರು ಹಿರಿಯರಾಗಿದ್ದರೂ ಮಾತನಾಡುವಾಗ ಭಾಷೆಯ ಮಿತಿ ಅರಿತು ಮಾತನಾಡಬೇಕು. ಎಲ್ಲರಿಗೂ ತಿರುಗೇಟು ನೀಡುವ ಶಕ್ತಿ ಇರುತ್ತದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಜೂನ್ 17 ರಂದು ದೆಹಲಿಯಲ್ಲಿ ನಡೆದ ಶಿವಸೇನಾ (ಯುಬಿಟಿ) ಸಂಸದೀಯ ಮಂಡಳಿ ಸಭೆಗೆ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಭೌಸಾಹೇಬ್ ವಾಕಚೌರೆ, ನಾಗೇಶ್ ಪಾಟೀಲ್ ಅಷ್ಟೀಕರ್ ಮತ್ತು ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಗೈರುಹಾಜರಾಗಿದ್ದರು(ಏಜೆನ್ಸೀಸ್).