ದೆಹಲಿ: ಇಂದು ಆರಂಭವಾಗಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಮಹಿಳಾ ಮೀಸಲಾತಿ, ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತಾದ ಮಸೂದೆಗಳ ಚರ್ಚೆಯ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಸ್ವರೂಪದ ಸಂಘರ್ಷ ಏರ್ಪಟ್ಟಿದೆ.
ಅದರಲ್ಲೂ ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ ನಡುವಿನ ನೇರ ವಾಕ್ಸಮರ ಸದನದ ವಾತಾವರಣವನ್ನು ಕಾವೇರಿಸುವಂತೆ ಮಾಡಿತು.
ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಕ್ಷೇತ್ರ ಪುನರ್ವಿಂಗಡಣೆಯನ್ನು ಜನಗಣತಿಯಿಂದ ಬೇರ್ಪಡಿಸಿರುವ ಸರ್ಕಾರದ ಕ್ರಮವನ್ನು ಸಾಂವಿಧಾನಿಕ ವಿರೋಧಿ ಎಂದು ಟೀಕಿಸಿದರು. ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನೀಡಬೇಕೆಂಬ ಧರ್ಮೇಂದ್ರ ಯಾದವ್ರ ವಾದವನ್ನು ಬೆಂಬಲಿಸಿದ ಅಖಿಲೇಶ್ ಯಾದವ್, ಸರ್ಕಾರವು ಜನಗಣತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸುತ್ತಾ, ಜಾತಿ ಗಣತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು.
ಅಮಿತ್ ಷಾ ತಿರುಗೇಟು..
ಪ್ರತಿಪಕ್ಷಗಳ ಈ ವಾದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ, 2027ರ ಜನಗಣತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸರ್ಕಾರವು ಜಾತಿ ಆಧಾರಿತ ಜನಗಣತಿಯನ್ನು ನಡೆಸಲು ನಿರ್ಧರಿಸಿದೆ ಎಂದು ದೇಶಕ್ಕೆ ಭರವಸೆ ನೀಡಿದರು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ಸಮಾಜವಾದಿ ಪಕ್ಷದ ಬೇಡಿಕೆಯನ್ನು ತಳ್ಳಿಹಾಕಿದರು. ಭಾರತದ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ನೀಡುವುದಿಲ್ಲ ಮತ್ತು ಮುಸ್ಲಿಂ ಸಮುದಾಯಕ್ಕೆ ಅಂತಹ ಕೋಟಾ ನೀಡುವುದು ಅಸಂವಿಧಾನಿಕ ಎಂದು ತಿಳಿಸಿದ ಷಾ, ಸಮಾಜವಾದಿ ಪಕ್ಷಕ್ಕೆ ಇಷ್ಟವಿದ್ದರೆ ತನ್ನೆಲ್ಲಾ ಟಿಕೆಟ್‌ಗಳನ್ನು ಮುಸ್ಲಿಮರಿಗೇ ನೀಡಲಿ, ಆದರೆ ಸಂವಿಧಾನ ಬಾಹಿರ ಬೇಡಿಕೆ ಸಲ್ಲದು ಎಂದು ತಿರುಗೇಟು ನೀಡಿದರು.
ಅಮಿತ್ ಷಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅಖಿಲೇಶ್ ಯಾದವ್, ಗೃಹ ಸಚಿವರ ಮಾತುಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದರು. ಮುಸ್ಲಿಂ ಮಹಿಳೆಯರು ಈ ದೇಶದ ಜನಸಂಖ್ಯೆಯ ಭಾಗವಲ್ಲವೇ? ಎಂದು ಪ್ರಶ್ನಿಸಿದ ಎಸ್ಪಿ ಸಂಸದರು, ಮಸೂದೆಯಲ್ಲಿ ಎಲ್ಲ ವರ್ಗದವರಿಗೂ ಸಮಾನ ಪ್ರಾತಿನಿಧ್ಯ ಇರಬೇಕು ಎಂದು ಆಗ್ರಹಿಸಿದರು. ಉಭಯ ನಾಯಕರ ನಡುವಿನ ಚರ್ಚೆಯು ವಾಗ್ವಾದಕ್ಕೆ ತಿರುಗಿ ಸದನದಲ್ಲಿ ಗದ್ದಲ ಉಂಟಾದಾಗ, ಲೋಕಸಭೆ ಸ್ಪೀಕರ್ ಮಧ್ಯಪ್ರವೇಶಿಸಿ ಇಬ್ಬರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಪ್ರತ್ಯೇಕ ಸಮಯ ನೀಡುವುದಾಗಿ ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಹಿಳಾ ಮೀಸಲಾತಿ ಮಸೂದೆಯ ಆಶಯವನ್ನು ವಿರೋಧ ಪಕ್ಷಗಳು ಸ್ವಾಗತಿಸಿದರೂ, ಅದರ ಜಾರಿಗೆ ತಂದಿರುವ ಸೀಮಾ ನಿರ್ಣಯದ ನಿಬಂಧನೆಗಳು ಮತ್ತು ಒಳ ಮೀಸಲಾತಿಯ ಕೊರತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ(ಏಜೆನ್ಸೀಸ್).