ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧದ ವಂಚನೆ ಪ್ರಕರಣಗಳನ್ನು ಕೊನೆಗೊಳಿಸಲು ಅಮೆರಿಕ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi), ಭಾರತ-ಅಮೆರಿಕ ವ್ಯಾಪಾರ ಒಪ್ಪಂದವಲ್ಲ, ಅದು ಅದಾನಿ ಬಿಡುಗಡೆ ಒಪ್ಪಂದ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಫೆಡರಲ್ ಕೋರ್ಟ್ನಲ್ಲಿ ಅದಾನಿ ಗ್ರೂಪ್ ವಿರುದ್ಧ ಹೂಡಲಾಗಿದ್ದ ಬಹುಕೋಟಿ ರೂಪಾಯಿ ವಂಚನೆ ಮತ್ತು ಲಂಚದ ಆರೋಪದ ಪ್ರಕರಣಗಳನ್ನು ಕೊನೆಗೊಳಿಸಲು ಅಮೆರಿಕದ ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದು ಗುರುವಾರ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ತಮ್ಮ ತೀಕ್ಷ್ಣ ಮುಂದುವರೆಸಿ, ರಾಜಿ ಮಾಡಿಕೊಂಡ ಪ್ರಧಾನಿ ಎಂದು ಕರೆದಿದ್ದು, ಪ್ರಧಾನಿ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿಲ್ಲ. ಬದಲಾಗಿ ಅದಾನಿ ಬಿಡುಗಡೆಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಅಧಿಕೃತ ಎಕ್ಸ್ ಖಾತೆಯಲ್ಲೂ ಕೂಡ, ಅದಾನಿ ವಿರುದ್ಧದ ಅಮೆರಿಕದಲ್ಲಿನ ವಂಚನೆ ಪ್ರಕರಣವನ್ನು ಮುಚ್ಚಲಾಗುತ್ತಿರುವ ಬಗ್ಗೆ ವರದಿಯಾಗಿದೆ. ಅದಾನಿಗೆ ಪರಿಹಾರ ನೀಡುವ ಏಕೈಕ ಉದ್ದೇಶಕ್ಕಾಗಿ ಮೋದಿ ಅಮೆರಿಕದೊಂದಿಗೆ ಏಕಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ. ಹೀಗಾಗಿಯೇ ಮೋದಿ ಅಮೆರಿಕದ ಮುಂದೆ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಟ್ರಂಪ್ ಏನು ಹೇಳುತ್ತಾರೋ, ಮೋದಿ ಅದನ್ನೇ ಮಾಡುತ್ತಾರೆ. ಮೋದಿ ಸಂಪೂರ್ಣವಾಗಿ ರಾಜಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದೆ.
ನವೆಂಬರ್ 2024ರಲ್ಲಿ ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿಯು ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಭಾರತದಲ್ಲಿ ಸೋಲಾರ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ (ಅಂದಾಜು 2100 ಕೋಟಿ ರೂ.) ಲಂಚ ನೀಡಲು ಅದಾನಿ ಗ್ರೂಪ್ ಸಂಚು ರೂಪಿಸಿತ್ತು ಮತ್ತು ಈ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಂಚಿಸಿದೆ ಎಂದು ಅಮೆರಿಕ ಆರೋಪಿಸಿತ್ತು.
ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ಮೊದಲಿನಿಂದಲೂ ಸಾರಾಸಗಟಾಗಿ ನಿರಾಕರಿಸುತ್ತಲೇ ಬಂದಿತ್ತು. ಆರೋಪಿಗಳು ಯಾರೂ ಅಮೆರಿಕದಲ್ಲಿ ಇರದ ಕಾರಣ ಮತ್ತು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಿಮಿನಲ್ ತನಿಖೆಯು ಸದ್ಯಕ್ಕೆ ಸ್ಥಗಿತಗೊಂಡಿತ್ತು.
ಅದಾನಿ ಪರ ವಕೀಲರ ವಾದವೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಪರ ವಕೀಲರು ಇತ್ತೀಚೆಗೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದು, ಎಸ್‌ಇಸಿ (SEC) ಹೂಡಿರುವ ವಂಚನೆ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದರು. "ಅಮೆರಿಕದ ನಿಯಂತ್ರಕ ಸಂಸ್ಥೆಗಳಿಗೆ ಭಾರತೀಯ ಪ್ರಜೆಗಳ ಮೇಲೆ ಕಾನೂನು ಕ್ರಮ ಜರುಗಿಸುವ ಯಾವುದೇ ಅಧಿಕಾರ ವ್ಯಾಪ್ತಿ (Jurisdiction) ಇಲ್ಲ. ಅಲ್ಲದೆ ಪ್ರಕರಣಕ್ಕೆ ಆಧಾರವಾಗಿ ಇಡಲಾಗಿರುವ ಹೇಳಿಕೆಗಳು ಕಾನೂನುಬದ್ಧವಾಗಿ ಸಾಬೀತಾಗುವಂತದ್ದಲ್ಲ" ಎಂದು ವಾದಿಸಿದ್ದರು. ಈ ಪ್ರಬಲ ಕಾನೂನು ಹೋರಾಟದ ಬೆನ್ನಲ್ಲೇ ಈಗ ಅಮೆರಿಕ ಸರ್ಕಾರವೇ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ,(ಏಜೆನ್ಸೀಸ್).