ಕೇಂದ್ರ ಸರ್ಕಾರದ ವಿರುದ್ಧ ಪವನ್ ಖೇರಾ ವಾಗ್ದಾಳಿ
ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧದ ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ಕೇಸ್ ವಿಚಾರಣೆಯನ್ನು ತೆಗೆದುಕೊಳ್ಳಲು ದೆಹಲಿ ನ್ಯಾಯಾಲಯ ನಿರಾಕರಿಸಿದ ಬಳಿಕ ಕಾಂಗ್ರೆಸ್ ನಾಯಕರು ಇದನ್ನು ನೈತಿಕ ಮತ್ತು ರಾಜಕೀಯ ಗೆಲುವು ಎಂದು ಬಣ್ಣಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ನಾಯಕ ಪವನ್ ಖೇರಾ, ಗಾಂಧಿನಗರದ ಗ್ಯಾಂಗ್‌ಗಳು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಈ ಪ್ರಕರಣ ರಾಹುಲ್ ಗಾಂಧಿಯವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪಿತೂರಿಯ ಭಾಗವಾಗಿದೆ, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ, ಅದಕ್ಕಾಗಿಯೇ ಇದೆಲ್ಲಾ ನಡೆಯುತ್ತಿದೆ. ಇದು ಕೇವಲ ಸಂಸದರ ವಿರುದ್ಧವಲ್ಲ, ಬದಲಾಗಿ ಭಾರತದ ಜನರ ವಿರುದ್ಧದ ಪಿತೂರಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಕೀಲ ಮೊಹಮ್ಮದ್ ಖಾನ್, ನ್ಯಾಷನಲ್ ಹೆರಾಲ್ಡ್ ಮೊದಲ ದಿನದಿಂದಲೂ ನಕಲಿ ಪ್ರಕರಣವಾಗಿತ್ತು ಎಂದು ಹೇಳಿದರು. ರಾಹುಲ್ ಗಾಂಧಿ ಸ್ವತಃ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ಗಂಟೆಗಟ್ಟಲೆ ವಿಚಾರಣೆ ಎದುರಿಸಿದರು, ಆದರೆ ವ್ಯಾಪಕ ಸಂಪನ್ಮೂಲಗಳನ್ನು ನಿಯೋಜಿಸಿದರೂ ಕೇಂದ್ರ ತನಿಖಾ ಸಂಸ್ಥೆ ಅವರ ವಿರುದ್ಧ ಪ್ರಕರಣವನ್ನು ನಿರ್ಮಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೊಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ಸರ್ಕಾರದ ನೀಚ ಮತ್ತು ಕಾನೂನುಬಾಹಿರ ಕ್ರಮಗಳು ಸಂಪೂರ್ಣವಾಗಿ ಬಹಿರಂಗಗೊಂಡಿವೆ ಎಂದು ಹೇಳಿದೆ. ಈ ಪ್ರಕರಣವು ಕಾನೂನುಬಾಹಿರ ಮತ್ತು ದುರುದ್ದೇಶದಿಂದ ಕೂಡಿದ್ದು, ಇಡಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದೆ ಮತ್ತು ಯಾವುದೇ ಎಫ್‌ಐಆರ್ ಇಲ್ಲದೆ ಯಾವುದೇ ಪ್ರಕರಣ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದೆ.
ರಾಜಕೀಯ ದ್ವೇಷ ಮತ್ತು ಸೇಡಿನ ಮನೋಭಾವದಿಂದ ಪ್ರಮುಖ ವಿರೋಧ ಪಕ್ಷದ ವಿರುದ್ಧ ಕಳೆದ ಹತ್ತು ವರ್ಷದಲ್ಲಿ ಮೋದಿ ಸರ್ಕಾರ ನಡೆಸಿದ ಈ ಕ್ರಮವು ಇಂದು ಇಡೀ ರಾಷ್ಟ್ರದ ಮುಂದೆ ಬಹಿರಂಗವಾಗಿದೆ, ಪಕ್ಷವು ಸತ್ಯ ಮತ್ತು ಪ್ರತಿಯೊಬ್ಬ ಭಾರತೀಯನ ಹಕ್ಕುಗಳಿಗಾಗಿ ಹೋರಾಡಲು ಬದ್ಧವಾಗಿದೆ ಮತ್ತು ಅದಕ್ಕೆ ಹೆದರುವುದಿಲ್ಲ ಎಂದು ಬರೆದುಕೊಂಡಿದೆ.
ಪ್ರಕರಣದ ಹಿನ್ನೆಲೆ ಮತ್ತು ED ಆರೋಪಗಳು
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ನೀಡಿದ ದೂರಿನಿಂದ ಆರಂಭವಾದ ಈ ತನಿಖೆಯು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಆಸ್ತಿಗಳ ದುರುಪಯೋಗದ ಆರೋಪವನ್ನು ಗುರಿಯಾಗಿಸಿಕೊಂಡಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ 38 ಪ್ರತಿಶತ ಷೇರುಗಳನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಸಾಲಗಳನ್ನು ಬಳಸಿಕೊಂಡು 50 ಲಕ್ಷ ರೂ.ಗೆ 2,000 ಕೋಟಿ ರೂ.ಗೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ, ಇದರಲ್ಲಿ ನಕಲಿ ಬಾಡಿಗೆ ರಶೀದಿಗಳು ಮತ್ತು ನಕಲಿ ವಹಿವಾಟುಗಳು ಸೇರಿವೆ ಎನ್ನುವುದು ಇಡಿ ಆರೋಪ(ಏಜೆನ್ಸೀಸ್).