ನವದೆಹಲಿ: ಸಾರ್ವಜನಿಕರು ಹಾಗೂ ಮಹಿಳೆಯರಿಂದ ಅರ್ಜಿಗಳನ್ನು ಸ್ವೀಕರಿಸುವ ವೇಳೆ ಅರೆಬೆತ್ತಲಾಗಿ (ಒಳ ಉಡುಪಿನಲ್ಲಿ) ಕುಳಿತು ನೋಂದಣಿ ಮಾಡುತ್ತಿದ್ದ ಆಮ್ ಆದ್ಮಿ ಪಾರ್ಟಿ ಶಾಸಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ
, ಶಾಸಕನ ವಿರುದ್ಧ ಶಾಸನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ವಾಯುವ್ಯ ದೆಹಲಿಯ ಕಿರಾರಿ ಕ್ಷೇತ್ರದ ಎಎಪಿ ಶಾಸಕ ಅನಿಲ್ ಝಾ ವತ್ಸ್ ಎಂಬುವವರು ಅರ್ಜಿಗಳನ್ನು ಸ್ವೀಕರಿಸುವಾಗ ಶಾರ್ಟ್ ಹಾಗೂ ಬನಿಯನ್ ಧರಿಸಿದ್ದು, ತೊಡೆಯ ಮೇಲೆ ಕೇಸರಿ ವಸ್ತ್ರವನ್ನು ಹೊದ್ದಯ ಸಿಎಂ ಸಾಲಿನಲ್ಲಿ ಕುಳಿತುಕೊಂಡಿರುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು.
ಆದಾಗ್ಯೂ, ದೆಹಲಿ ಸರ್ಕಾರದ ಮಹಿಳಾ ಆರ್ಥಿಕ ನೆರವು ಯೋಜನೆಯ ಅರ್ಜಿಗಳಿಗೆ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಸಾಲಿನಲ್ಲಿ ನಿಂತು ಸಹಿ ಪಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶಾಸಕನ ವೈರಲ್ ವಿಡಿಯೋಗೆ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿಎಂ ರೇಖಾ ಗುಪ್ತಾ, "ಮಹಿಳೆಯರು ಅರ್ಜಿಗಳಿಗೆ ಸಹಿ ಪಡೆಯಲು ಬಂದಾಗ ಕನಿಷ್ಠ ಸೂಕ್ತ ಬಟ್ಟೆಯನ್ನಾದರೂ ಧರಿಸುವ ಸೌಜನ್ಯ ಇರಬೇಕು. ಈ ರೀತಿಯ ಅಸಭ್ಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಅವರ ಶಾಸಕತ್ವವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲೂ ಶಾಸಕ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂದು ಸಿಎಂ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಎಎಪಿ ಶಾಸಕ ಅನಿಲ್ ಝಾ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಯಾವುದೇ ತಪ್ಪು ಸನ್ನೆಗಳನ್ನು ಮಾಡಿಲ್ಲ. ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷಿ ಇದ್ದರೆ ತೋರಿಸಲಿ. ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಲಾಗದೇ ಈ ರೀತಿಯ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿ ಲಕ್ಷ್ಮಿ ಯೋಜನೆ
ಆಗಸ್ಟ್ 1 ರಂದು ಚಾಲನೆ ನೀಡಲಾದ 'ದೆಹಲಿ ಲಕ್ಷ್ಮಿ ಯೋಜನೆ'ಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಯೋಜನೆ ಪ್ರಾರಂಭವಾದ ಕೇವಲ 7 ದಿನಗಳಲ್ಲಿ 5.14 ಲಕ್ಷಕ್ಕೂ ಹೆಚ್ಚು ನೋಂದಣಿಯಾಗಿದ್ದು, 2.18 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಸಿಎಂ ಹೇಳಿದ್ದರೆ, ಬಡ ಮಹಿಳೆಯರನ್ನು ಹೊರಗಿಡುವಂತಹ ಅರ್ಹತಾ ಮಾನದಂಡಗಳನ್ನು ಸರ್ಕಾರ ವಿಧಿಸಿದೆ ಎಂದು ಎಎಪಿ ಆರೋಪಿಸಿದೆ (ಏಜೆನ್ಸೀಸ್).