ನವದೆಹಲಿ: ದೇಶದಲ್ಲಿ ಆಡಳಿತ ಬದಲಾವಣೆ ಮಾಡಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಯತ್ನಿಸುತ್ತಿವೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಹೌದು ಆಡಳಿತ ಬದಲಾವಣೆಯೇ ನಮ್ಮ ಅಜೆಂಡಾ, ಅದನ್ನು ಪ್ರಜಾಪ್ರಭುತ್ವದ ಮೂಲಕವೇ ಸಾಧಿಸುತ್ತೇವೆ ಎಂದು ಹೇಳಿದ್ದಾರೆ.
ಶುಕ್ರವಾರ(ಅ. 16) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಮೋದಿ ಸರ್ಕಾರವನ್ನು ಉರುಳಿಸುವ ಉದ್ದೇಶವನ್ನು ಕಾಂಗ್ರೆಸ್ ಎಂದಿಗೂ ಕೈಬಿಟ್ಟಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಕೂಡ ಇದನ್ನೇ ಮಾಡಿತ್ತು ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಕೆಲಸವೆಂದರೆ ಸರ್ಕಾರವನ್ನು ವಿರೋಧಿಸುವುದು, ಬಹಿರಂಗಪಡಿಸುವುದು ಮತ್ತು ಪದಚ್ಯುತಗೊಳಿಸುವುದು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳುತ್ತಿದ್ದರು. ಬಿಜೆಪಿ ಸರ್ಕಾರ ಅವರಿಗೆ ಭಾರತ ರತ್ನ ನೀಡಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಸಂವಿಧಾನಿಕ ವಿಧಾನಗಳ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳಲು ಬಯಸುತ್ತದೆ ಎಂಬ ಆರೋಪವನ್ನು ನಿರಾಕರಿಸಿದ ಅವರು, ಸಿಇಸಿಯನ್ನು ಪ್ರಶ್ನಿಸುವುದು ಇಸಿಐ ಮೇಲಿನ ದಾಳಿ ಎನ್ನಲಾಗಲ್ಲ. ಚುನಾವಣಾ ಸುಧಾರಣೆಗಳನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಗೆ ಸಮನಾಗುವುದಿಲ್ಲ. ಮತ್ತು ಸರ್ಕಾರವನ್ನು ಬದಲಾಯಿಸಲು ಪ್ರಯತ್ನಿಸುವುದು ದಂಗೆಯಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮೋದಿ ಸರ್ಕಾರದಿಂದ ಯಾರಾದರೂ ಪ್ರಶ್ನೆ ಕೇಳಿದಾಗಲೆಲ್ಲಾ, ಆ ಪ್ರಶ್ನೆಗೆ ಉತ್ತರಿಸುವ ಬದಲು, ಅವರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾರೆ. ಮತ್ತು ಪ್ರಶ್ನೆ ಎತ್ತುವವರ ವಿರುದ್ಧ ಪಿತೂರಿಗಳನ್ನು ರೂಪಿಸಲು ಪ್ರಾರಂಭಿಸುತ್ತಾರೆ. ಇಂದು, ಇಡೀ ದೇಶವು ಜ್ಞಾನೇಶ್ ಕುಮಾರ್ ಅವರನ್ನು ಅವರ ಹುದ್ದೆಯಿಂದ ಯಾಕೆ ತೆಗೆದುಹಾಕುತ್ತಿಲ್ಲ ಎಂದು ಕೇಳುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).