ಯುಎನ್‌ನಲ್ಲಿ ಪಾಕಿ ಪ್ರಧಾನಿಯ ಬೆವರಿಳಿಸಿದ ಭಾರತೀಯ ರಾಯಭಾರಿ! 
ದೇಶ

ಭಯೋತ್ಪಾದನೆಗೆ ಮುಂದಾದ್ರೆ ತಕ್ಕ ಪರಿಣಾಮ ಕಟ್ಟಿಟ್ಟ ಬುತ್ತಿ: ಯುಎನ್‌ನಲ್ಲಿ ಪಾಕಿ ಪ್ರಧಾನಿಯ ಬೆವರಿಳಿಸಿದ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿ | Petal Gahlot

Petal Gahlot: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಮಾಡಿದ ಭಾಷಣಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕ್​ ಸರ್ಕಾರವನ್ನು ಸೇನೆಯಿಂದ, ಸೇನೆಗಾಗಿ ಮತ್ತು ಸೇನೆಯ ಪ್ರಭುತ್ವ ಹೊಂದಿರುವ ಶಾಸನ ಎಂದು ಕರೆದಿರುವ ಭಾರತ, ಇಸ್ಲಾಮಾಬಾದ್ ತನ್ನ ಸ್ವಾರ್ಥಕ್ಕಾಗಿ ಭಯೋತ್ಪಾದನೆ, ವಂಚನೆ ಮತ್ತು ದ್ವಿಮುಖ ನೀತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

Petal Gahlot: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಮಾಡಿದ ಭಾಷಣಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕ್​ ಸರ್ಕಾರವನ್ನು ಸೇನೆಯಿಂದ, ಸೇನೆಗಾಗಿ ಮತ್ತು ಸೇನೆಯ ಪ್ರಭುತ್ವ ಹೊಂದಿರುವ ಶಾಸನ ಎಂದು ಕರೆದಿರುವ ಭಾರತ, ಇಸ್ಲಾಮಾಬಾದ್ ತನ್ನ ಸ್ವಾರ್ಥಕ್ಕಾಗಿ ಭಯೋತ್ಪಾದನೆ, ವಂಚನೆ ಮತ್ತು ದ್ವಿಮುಖ ನೀತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಭಾಷಣದ ನಂತರ ಪ್ರತ್ಯುತ್ತರದ ಹಕ್ಕು (Right of Reply) ಚಲಾಯಿಸಿ ಮಾತನಾಡಿದ ಯುಎನ್‌ನಲ್ಲಿನ ಭಾರತದ ಕಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಪೇಟಲ್ ಗೆಹ್ಲೋಟ್, ಪಾಕಿಸ್ತಾನದಲ್ಲಿ ನಿಜವಾದ ಅಧಿಕಾರ ಯಾರ ಕೈಯಲ್ಲಿದೆ ಎಂಬುದರ ಬಗ್ಗೆ ಜಗತ್ತಿಗೆ ಯಾವುದೇ ಭ್ರಮೆ ಇರಬಾರದು ಎಂದು ಹೇಳಿದರು.

ಪಾಕಿಗಳಿಗೆ ಪೇಟಲ್ ಗೆಹ್ಲೋಟ್ ತಕ್ಕ ತಿರುಗೇಟು!...

ಸ್ವತಃ ತನ್ನ ದೇಶದ ಜನರಿಂದಲೇ ರಕ್ಷಣೆ ಪಡೆಯಲು ರಾಜಧಾನಿಯನ್ನು ಕೋಟೆಯಂತೆ ಭದ್ರಪಡಿಸಿಕೊಂಡಿರುವ ಸರ್ಕಾರವೊಂದರಿಂದ ನಾವು ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಮಾನವ ಮೌಲ್ಯಗಳ ಕುರಿತು ಕಪಟತನದ ಭಾಷಣಗಳನ್ನು ಕೇಳಿದ್ದೇವೆ. ಅಧ್ಯಕ್ಷರೇ, ಇದು ಸಂಭವಿಸುತ್ತಿರುವುದಕ್ಕೆ ಕಾರಣವೇನೆಂದರೆ, ಇದು ಸೇನೆಯಿಂದ, ಸೇನೆಗಾಗಿ ಮತ್ತು ಸೇನೆಯ ನಿರ್ದೇಶನದಲ್ಲೇ ನಡೆಯುತ್ತಿರುವ ಆಡಳಿತ. ಅವರ ಕಟುಕಥೆಗಳ ನಾಯಕರು ಬರುತ್ತಾರೆ ಮತ್ತು ಹೋಗುತ್ತಾರೆ, ಆದರೆ ಅಲ್ಲಿ ನೈಜ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದರಲ್ಲಿ ನಮಗೆ ಯಾವುದೇ ಸಂಶಯವಿಲ್ಲ ಎಂದು ಗೆಹ್ಲೋಟ್ ಟೀಕಿಸಿದರು.

ಅಲ್ಲದೆ, ಪಾಕಿಸ್ತಾನ ಮಿಲಿಟರಿ ಅಕಾಡೆಮಿ ಬಳಿಯೇ ಅಡಗಿದ್ದ ಆಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ವಿಚಾರವನ್ನು ಪ್ರಸ್ತಾಪಿಸಿದ ಗೆಹ್ಲೋಟ್, ನ್ಯೂಯಾರ್ಕ್ ನಗರ ಹಾಗೂ ಜಗತ್ತು 9/11 ರ ಭೀಕರ ಭಯೋತ್ಪಾದಕ ದಾಳಿಯ 25 ನೇ ವರ್ಷದ ನೆನಪನ್ನು ಆಚರಿಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಪ್ರತಿನಿಧಿಯಿಂದ ಇಂತಹ ವಿಚಿತ್ರ ಹೇಳಿಕೆಗಳು ಬಂದಿವೆ. ಈ ದಾಳಿಯ ಮಾಸ್ಟರ್‌ಮೈಂಡ್ ಒಸಾಮಾ ಬಿನ್ ಲಾಡೆನ್, ಪಾಕಿಸ್ತಾನ ಸೇನೆಯ ಪ್ರಮುಖ ಅಕಾಡೆಮಿಯ ಅಂಗಳದಲ್ಲೇ ವಾಸಿಸುತ್ತಿದ್ದನು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ ಎಂದು ಗೆಹ್ಲೋಟ್ ಟಾಂಗ್ ನೀಡಿದರು.

ಧಾರ್ಮಿಕ ಅಸಹಿಷ್ಣುತೆ ಹಾಗೂ ಮಾನವ ಹಕ್ಕುಗಳ ವಿಷಯದಲ್ಲಿ ಪಾಕಿಸ್ತಾನದ ದ್ವಿಮುಖ ನೀತಿಯನ್ನು ಖಂಡಿಸಿದ ಪೇಟಲ್ ಗೆಹ್ಲೋಟ್, ಹಗಲಿನಲ್ಲಿ ಶಾಂತಿ ಮಂತ್ರ ಪಠಿಸಿದಂತೆ ನಾಟಕವಾಡುವ ಅವರು, ರಾತ್ರಿ ವೇಳೆಯಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಾರೆ. ದೈವನಿಂದನೆ ಕಾನೂನುಗಳನ್ನೇ ಹೊಂದಿರುವ ದೇಶವೊಂದು ನಮಗೆ ಧಾರ್ಮಿಕ ಸಹಿಷ್ಣುತೆಯ ಉಪದೇಶ ನೀಡುತ್ತಿರುವುದು ಹಾಸ್ಯಾಸ್ಪದ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವಾಗ, ಅವರ ಯಾವ ಮಾತುಗಳು ಕೂಡ ಪ್ರಪಂಚವನ್ನು ಮರಳು ಮಾಡಲು ಸಾಧ್ಯವಿಲ್ಲ ಆಕ್ರೋಶ ಹೊರಹಾಕಿದರು.

ಕಾಶ್ಮೀರ ವಿಚಾರದಲ್ಲಿ ಭಾರತದ ಸ್ಪಷ್ಟನೆ!

ಶಹಬಾಜ್ ಶರೀಫ್ ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಸ್ತಾಪ ಮಾಡಿದ್ದಕ್ಕೆ ಉತ್ತರಿಸಿದ ಗೆಹ್ಲೋಟ್, ಆ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ ಎಂದು ಪುನರುಚ್ಚರಿಸಿದರು. ಕಾಶ್ಮೀರದ ಬಗ್ಗೆ ಅವರು ಮಾತನಾಡಲೇಬೇಕೆಂದರೆ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯತ್ತ ನಾವು ಗಮನ ಹರಿಸಬೇಕಾಗುತ್ತದೆ. ಅಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಅಮಾನವೀಯ ಹತ್ಯೆಗಳು, ಬಲಪ್ರಯೋಗ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯ ಬಗ್ಗೆ ರಾವಲಕೋಟ್‌ನ ಜನರನ್ನು ಕೇಳಿ ನೋಡಿ ಎಂದು ಗೆಹ್ಲೋಟ್ ಸವಾಲು ಹಾಕಿದರು.

ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ!...

ಪಾಕಿಸ್ತಾನದ ಗಡಿದಾಟಿದ ಭಯೋತ್ಪಾದನೆಯ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಿದ ಗೆಹ್ಲೋಟ್, ಭಾರತವು ತನ್ನ ಆತ್ಮರಕ್ಷಣೆಯ ಹಕ್ಕನ್ನು ಬಳಸುವುದನ್ನು ಮುಂದುವರಿಸಲಿದೆ ಎಂದರು. ಪ್ರಮುಖ ಸಮಸ್ಯೆಯ ಮೂಲವೇ ಪಾಕಿಸ್ತಾನವು ದೀರ್ಘಕಾಲದಿಂದ ನಡೆಸಿಕೊಂಡು ಬರುತ್ತಿರುವ ಗಡಿದಾಟಿದ ಭಯೋತ್ಪಾದನೆ. ಭಯೋತ್ಪಾದಕರಿಗೆ ಓಡಿಹೋಗಲು ಅಥವಾ ಅಡಗಿಕೊಳ್ಳಲು ಎಲ್ಲೂ ಜಾಗವಿಲ್ಲ ಎಂಬುದನ್ನು ನಾವು ಕಳೆದ ವರ್ಷ (ಆಪರೇಷನ್​ ಸಿಂಧೂರ ಮೂಲಕ) ತೋರಿಸಿಕೊಟ್ಟಿದ್ದೇವೆ. ಉಗ್ರವಾದದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕು ಚಲಾಯಿಸುವುದನ್ನು ಮುಂದುವರೆಸಲಿದ್ದು, ಪಾಕಿಸ್ತಾನದ ಭಯೋತ್ಪಾದನೆಗೆ ತಕ್ಕ ಪರಿಣಾಮ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಸುಳ್ಳುಗಳನ್ನು ಪದೇ ಪದೇ ಹೇಳುವುದರಿಂದ ಅದು ಸತ್ಯವಾಗುವುದಿಲ್ಲ. ಪಾಕಿಸ್ತಾನದ ಭಯೋತ್ಪಾದನೆ, ವಂಚನೆ ಮತ್ತು ದ್ವಿಮುಖ ನೀತಿಯು ಅದಕ್ಕೂ ಅನುಕೂಲ ತರುವುದಿಲ್ಲ ಹಾಗೂ ಅದು ಜಗತ್ತಿಗೂ ಒಳಿತಲ್ಲ ಎಂದು ಗೆಹ್ಲೋಟ್​ ಹೇಳಿದರು.

ಶಹಬಾಜ್ ಶರೀಫ್ ಹೇಳಿದ್ದೇನು..?

ಇದಕ್ಕೂ ಮೊದಲು ಯುಎನ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ 2025 ರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಸಮಯೋಚಿತ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ಲಾಘಿಸಿದ್ದರು. ಟ್ರಂಪ್ ಅವರ ಮಧ್ಯಸ್ಥಿಕೆಯು ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಜನರ ಜೀವವನ್ನು ಉಳಿಸಿದೆ ಎಂದು ಶರೀಫ್ ಪ್ರತಿಪಾದಿಸಿದ್ದರು. ಆದರೆ, ಸಂಘರ್ಷದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಕುರಿತಾದ ಹೇಳಿಕೆಗಳನ್ನು ಭಾರತ ತಳ್ಳಿಹಾಕುತ್ತಲೇ ಬಂದಿದೆ.

ದಕ್ಷಿಣ ಏಷ್ಯಾ ಮತ್ತೆ ಸಂಘರ್ಷದ ಅಂಚಿಗೆ ತಲುಪದಂತೆ ತಡೆಯಲು ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಪರಿಹಾರ ಅಗತ್ಯ ಎಂದು ಶರೀಫ್ ಹೇಳಿದ್ದರು. ಇದರ ಜೊತೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಹಾಗೂ ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಮಾತುಕತೆಗೆ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದ್ದರು. ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುವ ಮೂಲಕ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವ ಹುಚ್ಚುತನವನ್ನು ಪಾಕ್​ ಪ್ರಧಾನಿ ಸಭೆಯಲ್ಲಿ ಮಾಡಿದರು(ಏಜೆನ್ಸೀಸ್​).