ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಸಂಭ್ರಮಿಸಿದ ಪ್ರಕಾಶ್ ರಾಜ್​ 
ದೇಶ

ಆಡಳಿತವನ್ನೇ ಮಂಡಿಯೂರಿಸಿದ ಜಿರಳೆಗಳು... ಸಿಜೆಪಿ, ವಾಂಗ್​ಚುಕ್, ವಿದ್ಯಾರ್ಥಿ ಸಮೂಹ​ ಕೊಂಡಾಡಿದ ಪ್ರಕಾಶ್​ ರಾಜ್​

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
  • ಪ್ರಧಾನ್ ರಾಜೀನಾಮೆ ಸಂಭ್ರಮಿಸಿದ ನಟ ಪ್ರಕಾಶ್ ರಾಜ್
  • ಸಿಜೆಪಿ, ವಾಂಗ್​ಚುಕ್​, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ನಟ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ ಕೂಡಲೇ ಸಿಜೆಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇದೇ ಸಂದರ್ಭದಲ್ಲಿ ಟ್ವೀಟ್​ ಮಾಡಿರುವ ನಟ ಪ್ರಕಾಶ್​ ರಾಜ್​, ಸೋನಮ್​ ವಾಂಗ್​ಚುಕ್ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಸಮೂಹಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಅಭಿನಂದನೆಗಳು ನನ್ನ ಪ್ರೀತಿಯ ಜಿರಳೆಗಳೇ... ಆಡಳಿತ ಕೊನೆಗೂ ಮಂಡಿಯೂರಿದೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಸಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು. ನೀವೆಲ್ಲರೂ ಆಡಳಿತವನ್ನು ಮಂಡಿಯೂರಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದೀರಿ" ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.
ಪ್ರಕಾಶ್ ರಾಜ್‌ಗೆ ಟ್ವೀಟ್​ ಬೆನ್ನಲ್ಲೇ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಭಿನ್ನ ಎನ್ನುವಂತೆ ಪ್ರಕಾಶ್‌ಗೆ ಪಾಸಿಟಿವ್​ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿದ್ದಕ್ಕೆ ಹಲವರು, ನಟನಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಸಮಯದಲ್ಲಿ ಹೋರಾಟಕ್ಕೆ ದನಿಗೂಡಿಸಿದ್ದ ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಮತ್ತು ಮಾಲಿವುಡ್​ ಸೆಲೆಬ್ರಿಟಿಗಳು ವಿದ್ಯಾರ್ಥಿಗಳ ಬೆನ್ನುತಟ್ಟಿದ್ದಾರೆ.

ಈ ಹೋರಾಟ ಶುರುವಾಗಿದ್ದು ಯಾವಾಗ?

ಧರ್ಮೇಂದ್ರ ಪ್ರಧಾನ್ ವಿರುದ್ಧ ಪ್ರತಿಭಟನೆ ಯಾವಾಗ ಆರಂಭವಾಯಿತು ಎಂಬ ಪ್ರಶ್ನೆಗೆ ಉತ್ತರ, 21 ನೀಟ್​ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆಗೆ ಶರಣಾದರು. ಇದೇ ವಿಷಯವನ್ನು ಮುಂದಿಟ್ಟು ಪ್ರತಿಭಟನೆ ಆರಂಭಿಸಿದ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ, ದೋಷಪೂರಿತ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವ ಆನ್‌ಲೈನ್ ಚಳವಳಿಯನ್ನು ಪ್ರಾರಂಭಿಸಿತು.
ಈ ಆಂದೋಲನವು ಮೇ 16, 2026ರಂದು ಆರಂಭವಾಯಿತು. ದಿನೇ ದಿನೇ ಹೋರಾಟದ ಕಿಚ್ಚು ಜೋರಾಯಿತು. ಅಮೆರಿಕದಿಂದ ದೀಪ್ಕೆ ಹಿಂತಿರುಗಿದ ಮರುದಿನವೇ ಕಾಕ್ರೋಜ್​ ಜನತಾ ಪಾರ್ಟಿಯು ಪ್ರತಿಭಟನೆಯನ್ನು ಜೂನ್ 6, 2026ರಂದು ಅಧಿಕೃತವಾಗಿ ದೆಹಲಿಯ ಮುಖ್ಯರಸ್ತೆಯಲ್ಲಿ ಶುರು ಮಾಡಿತು. ಅಲ್ಲಿಂದ, ಸೋನಮ್ ವಾಂಗ್​ಚುಕ್​ ಮತ್ತು ಪ್ರಕಾಶ್​ ರಾಜ್​ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾದರು,(ಏಜೆನ್ಸೀಸ್).