ಲಖನೌ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ರೀಲ್ಸ್ ಹುಚ್ಚಿಗೆ(Reels addiction), ನದಿಯಲ್ಲಿ ಮೋಜು ಮಾಡಲು ಹೋಗಿದ್ದ ನಾಲ್ವರು ಬಾಲಕರು ಮುಳುಗಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ(ಏ. 03) ವರದಿಯಾಗಿದೆ.
ಗೋರಖ್‌ಪುರ ಜಿಲ್ಲೆಯ ರಾಣಿದಿಹಾ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಈ ದುರಂತ ನಡೆದಿದ್ದು, ಮೋಜಿಗಾಗಿ ರಪ್ತಿ ನದಿಗೆ ಹೋಗಿದ್ದ ಒಂದೇ ಗ್ರಾಮದ ಐವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿದ್ದು, ಈ ವೇಳೆ ಒರ್ವ ಬಾಲಕ ಈಜಿ ದಡ ಸೇರಿದ್ದು, ಉಳಿದ ನಾಲ್ವರು ನದಿ ಪಾಲಾಗಿದ್ದಾರೆ.
ಮೃತರನ್ನು ಅಮನ್(15), ವಿವೇಕ್ ನಿಶಾದ್(15), ಗಗನ್ ಪಾಸ್ವಾನ್(15) ಹಾಗೂ ಅನಿಕೇತ್ ಯಾದವ್(13) ಎಂದು ಗುರುತಿಸಲಾಗಿದೆ. ಅವರ ಸ್ನೇಹಿತ ರಾಜ್‌ಕರನ್ ತಮ್ಮ ಸೈಕಲ್‌ಗಳಲ್ಲಿ ಸ್ಟಂಟ್‌ಗಳನ್ನು ಮಾಡುತ್ತಾ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುತ್ತಾ ಮಿರ್ಜಾಪುರ ಬಳಿಯ ಮಿರ್ಜಾಪುರ ಪಿಪಾ ಸೇತುವೆಯನ್ನು ತಲುಪಿದ್ದ ಎನ್ನಲಾಗಿದೆ.
ಈ ವೇಳೆ ಎಲ್ಲರೂ ನದಿಯಲ್ಲಿ ಸ್ನಾನ ಮಾಡಿ ರೀಲ್ಸ್ ಮಾಡಲು ಬಯಸಿದ್ದರು. ಆ ಉತ್ಸಾಹದಿಂದ. ಐವರು ಸ್ನೇಹಿತರು ಆಳವಾದ ನೀರಿಗೆ ಹೋಗಿದ್ದು, ಕ್ಷಣಾರ್ಧದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ರಾಜ್‌ಕರನ್ ಈಜಿ ದಡ ಸೇರಿದ್ದು, ಉಳಿದ ನಾಲ್ವರು ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.
ಸ್ಥಳೀಯರ ಮಾಹಿತಿಯ ಮೇರೆಗೆ, ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದು, ನದಿ ಈಜುಗಾರರ ಸಹಾಯದಿಂದ ಶುಕ್ರವಾರ ನಾಲ್ವರ ಶವಗಳನ್ನು ಹೊರ ತೆಗೆದಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).