Lutyens Bungalows > ಕೇಂದ್ರ ಸಚಿವರ ಅಧಿಕೃತ ನಿವಾಸಗಳ ರಿಪೇರಿಗೆ 92 ಕೋಟಿ ರೂ ವೆಚ್ಚ!
ಕೇಂದ್ರ ಸಚಿವರ ಅಧಿಕೃತ ನಿವಾಸಗಳ ದುರಸ್ತಿ, ಪೀಠೋಪಕರಣ ಹಾಗೂ ನವೀಕರಣಕ್ಕಾಗಿ ಸರ್ಕಾರ ಮಾಡುತ್ತಿರುವ ವೆಚ್ಚವು 2025-26ರ ಹಣಕಾಸು ವರ್ಷದಲ್ಲಿ 92.35 ಕೋಟಿ ರೂಪಾಯಿಗಳ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಇದು 2014-15 ರಲ್ಲಿ ವೆಚ್ಚ ಮಾಡಲಾಗಿದ್ದ 27.47 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಎಂದು ಪಿಟಿಐ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಲಭ್ಯವಾದ ಉತ್ತರದಿಂದ ತಿಳಿದುಬಂದಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ನೀಡಿದ ದತ್ತಾಂಶದ ಪ್ರಕಾರ, 2014-15 ರಿಂದ 2025-26 ರ ನಡುವಿನ ಅವಧಿಯಲ್ಲಿ ಸರ್ಕಾರವು ಸಚಿವರ ಬಂಗಲೆಗಳ ನಿರ್ವಹಣೆ ಮತ್ತು ನವೀಕರಣಕ್ಕಾಗಿ ಒಟ್ಟು 547.68 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. 2014 ರ ನಂತರ 2025-26 ರಲ್ಲಿ ವೆಚ್ಚವಾದ 92.35 ಕೋಟಿ ರೂಪಾಯಿಯೇ ಅತಿ ಹೆಚ್ಚಿನ ವಾರ್ಷಿಕ ವೆಚ್ಚವಾಗಿದೆ. ದೆಹಲಿಯ ಕೇಂದ್ರಭಾಗದಲ್ಲಿರುವ ವಿಶಾಲವಾದ ಆವರಣಗಳನ್ನು ಹೊಂದಿರುವ, ಹಳೆಯದಾಗುತ್ತಿರುವ ಈ ಹಳೆಯ ಕಟ್ಟಡಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ಇದಕ್ಕೆ ಹಣದುಬ್ಬರವೇ ಕಾರಣ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಹಳೆಯದಾಗುತ್ತಿರುವ ಬಂಗಲೆಗಳು ಮತ್ತು ತಾಂತ್ರಿಕ ಸಮಸ್ಯೆಗಳು
ಸಚಿವರ ನಿವಾಸಗಳ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಸಿಪಿಡಬ್ಲ್ಯೂಡಿ ಅಧಿಕಾರಿಗಳು ಸುದೀರ್ಘವಾಗಿ ವಿವರಿಸಿದ್ದಾರೆ. ಇಲ್ಲಿ ನಿರಂತರವಾಗಿ ಗೋಡೆಗಳಲ್ಲಿ ನೀರು ಸೋರಿಕೆ, ಗೆದ್ದಲು ಹಿಡಿಯುವುದು, ಹಳೆಯದಾದ ಎಲೆಕ್ಟ್ರಿಕಲ್ ವೈರಿಂಗ್ ವ್ಯವಸ್ಥೆ ಹಾಗೂ ಪ್ಲಂಬಿಂಗ್ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿಂದೆ ಕೆಲವು ಬಂಗಲೆಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವ ಯೋಜನೆಯಿತ್ತಾದರೂ ಅದು ಅಧಿಕೃತವಾಗಿ ಜಾರಿಗೆ ಬರಲಿಲ್ಲ. ಇವುಗಳಲ್ಲಿ ಹೆಚ್ಚಿನವು 80, 90 ರಿಂದ 100 ವರ್ಷಗಳಷ್ಟು ಹಳೆಯದಾದ ಬಂಗಲೆಗಳು. ಕೆಲವು ಕಟ್ಟಡಗಳು ಸುಸ್ಥಿತಿಯಲ್ಲಿಲ್ಲದ ಕಾರಣ ಅವುಗಳನ್ನು ನವೀಕರಿಸುವುದು ತೀರಾ ಅಗತ್ಯವಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಂಗಲೆ ವಲಯವನ್ನು 1912 ಮತ್ತು 1930 ರ ನಡುವೆ ಬ್ರಿಟಿಷರ ಆಡಳಿತಾವಧಿಯಲ್ಲಿ ನವದೆಹಲಿಯನ್ನು ಸಾಮ್ರಾಜ್ಯಶಾಹಿ ರಾಜಧಾನಿಯಾಗಿ ನಿರ್ಮಿಸುವಾಗ ಅಭಿವೃದ್ಧಿಪಡಿಸಲಾಯಿತು. ಸ್ವಾತಂತ್ರ್ಯಾನಂತರ ಇವುಗಳನ್ನು ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಸಚಿವರಿಗೆ, ಸಂಸದರಿಗೆ, ಹಿರಿಯ ನ್ಯಾಯಾಧೀಶರಿಗೆ ಮತ್ತು ಸೇನಾಧಿಕಾರಿಗಳಿಗೆ ನೀಡಲಾಯಿತು.
ಇತಿಹಾಸಕಾರ ಹಾಗೂ ಲೇಖಕ ಸ್ವಪ್ನಾ ಲಿಡಲ್ ಅವರು ಈ ಕುರಿತು ಮಾಹಿತಿ ನೀಡಿ, ಎಡ್ವಿನ್ ಲುಟಿಯನ್ಸ್ ಹೆಸರಿನಲ್ಲಿ ಈ ವಲಯವನ್ನು ಗುರುತಿಸಲಾಗುತ್ತದೆಯಾದರೂ, ಅವರು ರಾಷ್ಟ್ರಪತಿ ಭವನದ ಸುತ್ತಲಿನ ರಾಷ್ಟ್ರಪತಿ ಎಸ್ಟೇಟ್‌ನಲ್ಲಿರುವ ಬಂಗಲೆಗಳನ್ನು ಮಾತ್ರ ವಿನ್ಯಾಸಗೊಳಿಸಿದ್ದರು. ನವದೆಹಲಿಯ ಹೆಚ್ಚಿನ ವಸಾಹತುಶಾಹಿ ಯುಗದ ಸರ್ಕಾರಿ ಬಂಗಲೆಗಳನ್ನು ಬ್ರಿಟಿಷ್ ಆಡಳಿತದ ಲೋಕೋಪಯೋಗಿ ಇಲಾಖೆಯ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದರು ಎಂದು ವಿವರಿಸಿದ್ದಾರೆ.
ಬ್ರಿಟಿಷರು ಭಾರತದ ಇತರ ನಗರಗಳ ಸಿವಿಲ್ ಲೈನ್ಸ್‌ಗಳಲ್ಲಿ ತಮ್ಮ ಅಧಿಕಾರಿಗಳಿಗಾಗಿ ನಿರ್ಮಿಸುತ್ತಿದ್ದ ನಿವಾಸಗಳ ಮಾದರಿಯಲ್ಲೇ ಇವುಗಳನ್ನೂ ನಿರ್ಮಿಸಲಾಗಿತ್ತು. ಅಂದರೆ ಮುಖ್ಯ ಕಟ್ಟಡದ ಜೊತೆಗೆ ಸಿಬ್ಬಂದಿಗಾಗಿ ಪ್ರತ್ಯೇಕ ಸಹಾಯಕ ಕಟ್ಟಡಗಳು ಮತ್ತು ದೊಡ್ಡ ಆವರಣ ಇರುತ್ತಿತ್ತು. ಉದಾಹರಣೆಗೆ, ಪ್ರಸ್ತುತ ಗೃಹ ಸಚಿವ ಅಮಿತ್ ಷಾ ಅವರು ವಾಸಿಸುತ್ತಿರುವ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯಲ್ಲಿ ಹಿಂದೆ ಹಳೆಯ ಸಂಸತ್ ಭವನ ಹಾಗೂ ನಾರ್ತ್-ಸೌತ್ ಬ್ಲಾಕ್‌ಗಳ ವಾಸ್ತುಶಿಲ್ಪಿ ಹೆರ್ಬರ್ಟ್ ಬೇಕರ್ ವಾಸಿಸುತ್ತಿದ್ದರು ಎಂದು ಲಿಡಲ್ ಉಲ್ಲೇಖಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚಾದ ವೆಚ್ಚದ ವಿವರ
ಸಿಪಿಡಬ್ಲ್ಯೂಡಿ ನೀಡಿದ ವರ್ಷವಾರು ವೆಚ್ಚದ ಪಟ್ಟಿ ಇಲ್ಲಿದೆ
2014 ರಿಂದ 2019 ರವರೆಗೆ ಸಚಿವರ ಬಂಗಲೆಗಳ ರಿಪೇರಿಗೆ ವಾರ್ಷಿಕ ಸರಾಸರಿ 26.78 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ 2019 ರಿಂದ 2024 ರ ಅವಧಿಯಲ್ಲಿ ಈ ವಾರ್ಷಿಕ ಸರಾಸರಿ ವೆಚ್ಚ ಸುಮಾರು 50 ಕೋಟಿ ರೂಪಾಯಿಗೆ ಏರಿಕೆಯಾಯಿತು. ತದನಂತರದ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ. ಆದಾಗ್ಯೂ, ಸಚಿವರಲ್ಲದ ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ನಿವಾಸಗಳು ಹಾಗೂ ಸಚಿವಾಲಯಗಳ ಕಚೇರಿಗಳ ವೆಚ್ಚದ ದತ್ತಾಂಶವನ್ನು ಸಿಪಿಡಬ್ಲ್ಯೂಡಿ ನೀಡಿಲ್ಲ.
ಒಬ್ಬ ಸಚಿವರಿಗೆ ಸರಾಸರಿ 1.2 ಕೋಟಿ ರೂ ವೆಚ್ಚ
ಸಾಮಾನ್ಯವಾಗಿ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರು ಸೇರಿ ಸುಮಾರು 70 ರಿಂದ 72 ಸಚಿವರು ಇರುತ್ತಾರೆ. ಕಳೆದ ಹಣಕಾಸು ವರ್ಷದ 92.35 ಕೋಟಿ ರೂಪಾಯಿ ವೆಚ್ಚವನ್ನು ಲೆಕ್ಕಹಾಕಿದರೆ, ಪ್ರತಿ ಸಚಿವರ ಬಂಗಲೆಯ ನವೀಕರಣಕ್ಕೆ ಸರಾಸರಿ 1.2 ಕೋಟಿ ರೂಪಾಯಿ ವೆಚ್ಚವಾದಂತಾಗುತ್ತದೆ. ಆದರೆ ಪ್ರತಿಯೊಂದು ಬಂಗಲೆಯ ಭೌತಿಕ ಸ್ಥಿತಿಗೆ ಅನುಗುಣವಾಗಿ ಈ ವೆಚ್ಚ ವ್ಯತ್ಯಾಸವಾಗುತ್ತದೆ. ಕ್ಯಾಬಿನೆಟ್ ಸಚಿವರೊಬ್ಬರ ಸಿಬ್ಬಂದಿ ನೀಡಿದ ಮಾಹಿತಿಯಂತೆ, ಫ್ಯಾನ್, ಎಲ್ಇಡಿ ಲೈಟ್‌ಗಳಂತಹ ಎಲೆಕ್ಟ್ರಿಕಲ್ ವಸ್ತುಗಳ ದುರಸ್ತಿ, ಪ್ಲಂಬಿಂಗ್ ಕೆಲಸಗಳು ಮತ್ತು ಕೆಲವು ವರ್ಷಗಳಿಗೊಮ್ಮೆ ಫ್ಲೋರ್ ಟೈಲ್ಸ್ ಬದಲಾಯಿಸುವುದಕ್ಕಾಗಿ ಹೆಚ್ಚಿನ ಮನವಿಗಳು ಸಲ್ಲಿಕೆಯಾಗುತ್ತವೆ.
ಈ ಹಿಂದೆ, 2009 ರ ಸೆಪ್ಟೆಂಬರ್‌ನಲ್ಲಿ ಸಲ್ಲಿಕೆಯಾಗಿದ್ದ ಆರ್‌ಟಿಐಗೆ ಸಿಕ್ಕ ಉತ್ತರದ ಪ್ರಕಾರ, 2004 ರಿಂದ 2009 ರ ಅವಧಿಯಲ್ಲಿ ಯುಪಿಎ ಸರ್ಕಾರವು ಸಂಸದರು ಮತ್ತು ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆಗೆ ಒಟ್ಟು 93.50 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿತ್ತು ಎನ್ನಲಾಗಿದೆ(ಏಜೆನ್ಸೀಸ್).