Reels Craze 
ದೇಶ

120 ಕಿ.ಮೀ ವೇಗದಲ್ಲಿ ಅಜಾಗರೂಕ ಚಾಲನೆ: ರೀಲ್ಸ್ ಕ್ರೇಜ್‌ಗೆ ಬಲಿಯಾದ ನಾಲ್ವರು ಗೆಳೆಯರು! | Reels Craze

ಉದಯಪುರ: ವೇಗದ ಮಿತಿ ಮೀರಿ, ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ನಾಲ್ವರು ಯುವಕರು ಜೀವ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ಉದಯಪುರದ 'ಮೆಹಫಿಲ್-ಎ-ಮಿಲಾದ್' ಕಾರ್ಯಕ್ರಮ ಮುಗಿಸಿಕೊಂಡು ಆರು ಮಂದಿ ಸ್ನೇಹಿತರು ಅಹಮದಾಬಾದ್ ಹೆದ್ದಾರಿಯಲ್ಲಿ ಚಹಾ ಕುಡಿಯಲು ತೆರಳುತ್ತಿದ್ದರು. ಈ ವೇಳೆ ಇವರ ಕಾರು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮಹಮ್ಮದ್ ಅಯಾನ್ (17), ಆದಿಲ್ ಖುರೇಷಿ (14), ಶೇರ್ ಮಹಮ್ಮದ್ (19) ಮತ್ತು ಗುಲಾಮ್ ಖ್ವಾಜಾ (17) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ: ಅಪಘಾತದ ಕೆಲವೇ ಕ್ಷಣಗಳ ಮೊದಲು ಕಾರಿನಲ್ಲಿದ್ದ ಯುವಕರು ಚಿತ್ರೀಕರಿಸಿದ ಒಂಬತ್ತು ನಿಮಿಷಗಳ ವಿಡಿಯೋ ಈಗ ಲಭ್ಯವಾಗಿದೆ. 19 ವರ್ಷದ ಶೇರ್ ಮಹಮ್ಮದ್ ಎಂಬಾತ ಕಾರನ್ನು ಚಲಾಯಿಸುತ್ತಿದ್ದು, ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಧೂಮಪಾನ ಮಾಡುತ್ತಾ ಅತ್ಯಂತ ಅಜಾಗರೂಕತೆಯಿಂದ ಗಾಡಿ ಓಡಿಸುತ್ತಿರುವುದು ವಿಡಿಯೋದಲ್ಲಿದೆ.

ಹೇಗಾಯಿತು ಘಟನೆ?

ಕಾರಿನ ವೇಗವು ಗಂಟೆಗೆ 120 ರಿಂದ 140 ಕಿ.ಮೀ ತಲುಪಿದ್ದರೂ ಚಾಲಕ ವೇಗ ತಗ್ಗಿಸಲಿಲ್ಲ.ವೇಗ ಕಡಿಮೆ ಮಾಡು ಎಂದು ಸ್ನೇಹಿತರು ಪದೇ ಪದೇ ವಿನಂತಿಸಿದರೂ ಚಾಲಕ ಅದನ್ನು ನಿರ್ಲಕ್ಷಿಸಿದ್ದಾನೆ.ವಿಡಿಯೋದಲ್ಲಿ ವೇಗಮಾಪಕ (Speedometer) 120 ದಾಟುವುದು ಕಂಡುಬಂದ ಕೆಲವೇ ಸೆಕೆಂಡುಗಳಲ್ಲಿ ಜೋರಾದ ಕಿರುಚಾಟದೊಂದಿಗೆ ಕಾರು ಅಪಘಾತಕ್ಕೀಡಾಗಿದೆ.
ಅಪಘಾತದ ನಂತರದ ಏಳು ನಿಮಿಷಗಳ ಕಾಲ ಫೋನ್ ರೆಕಾರ್ಡಿಂಗ್ ಚಾಲನೆಯಲ್ಲೇ ಇತ್ತು. ಕತ್ತಲಲ್ಲಿ ಕೇಳಿಬರುವ ಸ್ನೇಹಿತರ ಗೋಳು ಕೇಳುಗರ ಕಣ್ಣಲ್ಲಿ ನೀರು ತರಿಸುವಂತಿದೆ. "ಬಚಾವೋ ಭಯ್ಯಾ... ನನಗೆ ಉಸಿರಾಡಲು ಆಗುತ್ತಿಲ್ಲ, ನನ್ನನ್ನು ಇಲ್ಲಿಂದ ಹೊರತೆಗೆಯಿರಿ" ಎಂದು ಗಾಯಾಳು ಸ್ನೇಹಿತನೊಬ್ಬ ರಕ್ಷಣೆಗಾಗಿ ಅಂಗಲಾಚುತ್ತಿರುವ ಧ್ವನಿ ವಿಡಿಯೋದಲ್ಲಿ ದಾಖಲಾಗಿದೆ,(ಏಜೆನ್ಸೀಸ್​).