ಮಹಾರಾಷ್ಟ್ರ ಪರಿಷತ್ ಸಮರದಲ್ಲಿ ಬಂಡಾಯ ಸ್ಫೋಟ! ಮಹಾಯುತಿ-ಎಂವಿಎ ಮೈತ್ರಿಕೂಟಗಳ ನಿದ್ದೆಗೆಡಿಸಿದ ರೆಬೆಲ್ ಅಭ್ಯರ್ಥಿಗಳು!
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಚುನಾವಣಾ ಯುದ್ಧ ಆರಂಭವಾಗಿದ್ದು, ವಿಧಾನ ಪರಿಷತ್‌ನ(Maharashtra MLC Elections 2026) 17 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಉಭಯ ಮೈತ್ರಿಕೂಟಗಳ ಪಾಲಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯದ ಬೆನ್ನಲ್ಲೇ, ಅಧಿಕೃತ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಉಭಯ ಪಾಳಯಗಳಲ್ಲಿ ಎದ್ದಿರುವ ಬಂಡಾಯದ ಕಿಡಿ ಇಡೀ ಚುನಾವಣಾ ಅಂಕಿಅಂಶವನ್ನು ಉಲ್ಟಾ-ಪಲ್ಟಾ ಮಾಡಿದೆ. ಸೀಟು ಹಂಚಿಕೆಯಿಂದ ಅಸಮಾಧಾನಗೊಂಡಿರುವ ಪ್ರಮುಖ ನಾಯಕರು ತಮ್ಮದೇ ಮೈತ್ರಿಕೂಟದ ವಿರುದ್ಧ ರೆಬೆಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ನಾಯಕರ ತಲೆನೋವಿಗೆ ಕಾರಣವಾಗಿದೆ.
ಮಹಾಯುತಿ ಪಾಳಯದಲ್ಲಿ ಅಸಮಾಧಾನ; ಸಚಿವರ ಮಕ್ಕಳೇ ರೆಬೆಲ್!
ಬಿಜೆಪಿ, ಶಿವಸೇನೆ (ಶಿಂದೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಒಳಗೊಂಡ ಮಹಾಯುತಿ ಮೈತ್ರಿಕೂಟವು ಎಲ್ಲಾ ೧೭ ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಟಿಕೆಟ್ ವಂಚಿತ ನಾಯಕರ ಬಂಡಾಯ ಇಲ್ಲಿ ಮಿತಿಮೀರಿದೆ.
ಸಂಭಾಜಿನಗರ-ಜಾಲ್ನಾ: ಈ ಕ್ಷೇತ್ರ ಬಿಜೆಪಿಗೆ ಹಂಚಿಕೆಯಾಗಿದ್ದರಿಂದ ಆಕ್ರೋಶಗೊಂಡಿರುವ ಶಿಂದೆ ಬಣದ ಶಿವಸೇನೆ ಶಾಸಕ ಅಬ್ದುಲ್ ಸತ್ತಾರ್, ತಮ್ಮದೇ ಮೈತ್ರಿಕೂಟದ ವಿರುದ್ಧ ತಮ್ಮ ಮಗ ಸಮೀರ್ ಸತ್ತಾರ್ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಹೈಪರ್ ಟೆನ್ಷನ್ ಸೃಷ್ಟಿಸಿದ್ದಾರೆ.
ರಾಯಗಢ ಮತ್ತು ಪ್ರಮುಖ ವಲಯಗಳು: ರಾಯಗಢದಲ್ಲಿ ಎನ್‌ಸಿಪಿಯ ಅನಿಕೇತ್ ತತ್ಕಾರೆ ವಿರುದ್ಧ ಮಹೇಂದ್ರ ದಳವಿ ಪುತ್ರಿ ಜುಯ್ಲಿ ದಳವಿ ರೆಬೆಲ್ ಆಗಿ ನಿಂತಿದ್ದಾರೆ. ಯವತ್ಮಾಲ್‌ನಲ್ಲಿ ಶಿವಸೇನೆಯ ದುಷ್ಯಂತ್ ಚತುರ್ವೇದಿ ವಿರುದ್ಧ ಬಿಜೆಪಿಯ ನಿತಿನ್ ಭುತಡಾ ಮತ್ತು ಎನ್‌ಸಿಪಿಯ ಸಾಜಿದ್ ಬೇಗ್ ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ. ಪುಣೆಯಲ್ಲಿ ಎನ್‌ಸಿಪಿಯ ವಿಕ್ರಮ್ ಕಾಕಡೆ ವಿರುದ್ಧ ಬಿಜೆಪಿ ನಾಯಕ ಪ್ರದೀಪ್ ಕಂದ್ ತೊಡೆತಟ್ಟಿದ್ದಾರೆ. ನಾಸಿಕ್, ಪರ್ಭಾನಿ, ನಾಂದೇಡ್ ಮತ್ತು ಜಲಗಾಂವ್ ಕ್ಷೇತ್ರಗಳಲ್ಲೂ ಮಿತ್ರಪಕ್ಷಗಳ ನಾಯಕರೇ ಪರಸ್ಪರ ವಿರುದ್ಧ ಸಿಡಿದೆದ್ದಿದ್ದಾರೆ.
‘ಮಹಾ ವಿಕಾಸ್ ಅಘಾಡಿ’ಗೂ ತಪ್ಪದ ಬಂಡಾಯದ ಬಿಸಿ; ಸೀಟು ಹಂಚಿಕೆ ತಲ್ಲಣ!
ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ‘ಮಹಾ ವಿಕಾಸ್ ಅಘಾಡಿ’ (MVA) ಮೈತ್ರಿಕೂಟವೂ ಸಹ ಈ ಆಂತರಿಕ ಕಚ್ಚಾಟದಿಂದ ಬಚಾವಾಗಿಲ್ಲ.
ನಾಂದೇಡ್ ಮತ್ತು ಭಂಡಾರಾ: ನಾಂದೇಡ್‌ನಲ್ಲಿ ಕಾಂಗ್ರೆಸ್‌ನ ರಾಮದಾಸ್ ಸುಮಠಂಕರ್ ವಿರುದ್ಧ ಮಾಧವರಾವ್ ಜವಾಲ್ಕರ್ ಬಂಡಾಯ ಎದ್ದಿದ್ದರೆ, ಯುಬಿಟಿ ಬಣದಿಂದ ಕೃಷ್ಣ ಅಷ್ಟಿಕರ್ ಕಣಕ್ಕಿಳಿದಿದ್ದಾರೆ. ಭಂಡಾರಾ-ಗೊಂಡಿಯಾದಲ್ಲಿ ಕಾಂಗ್ರೆಸ್‌ನ ಪ್ರಫುಲ್ ಅಗರ್ವಾಲ್ ವಿರುದ್ಧ ನಿಲೇಶ್ ಈಶ್ವರ್ಕರ್ ಮತ್ತು ದಿಲೀಪ್ ಬನ್ಸೋಡ್ ನಾಮಪತ್ರ ಸಲ್ಲಿಸಿ ಸಸ್ಪೆನ್ಸ್ ಹೆಚ್ಚಿಸಿದ್ದಾರೆ.
ಸಾಂಗ್ಲಿ ಮತ್ತು ಸೋಲಾಪುರ: ಸಾಂಗ್ಲಿಯಲ್ಲಿ ಶರದ್ ಪವಾರ್ ಬಣದ ಬಾಲಾಸಾಹೇಬ್ ಪಾಟೀಲ್ ವಿರುದ್ಧ ಕಾಂಗ್ರೆಸ್‌ನ ಸಂಜಯ್ ಮೆಂಧೆ ಮತ್ತು ಮಯೂರ್ ಪಾಟೀಲ್ ಸ್ಪರ್ಧೆಗೆ ಇಳಿದು ತ್ರಿಕೋನ ಸಂಘರ್ಷ ಸೃಷ್ಟಿಸಿದ್ದಾರೆ. ಇತ್ತ ಸೋಲಾಪುರದಲ್ಲಿ ಕಾಂಗ್ರೆಸ್‌ನ ಆದಿತ್ಯ ಫತೇಪುರ್ಕರ್ ವಿರುದ್ಧ ಶರದ್ ಪವಾರ್ ಬಣದ ವಸಂತ್ ನಾನಾ ದೇಶ್ಮುಖ್ ಮತ್ತು ಶಿವಸೇನೆ ಯುಬಿಟಿಯ ನಾಗೇಶ್ ಅಕ್ಕಲಕೋಟೆ ಇಬ್ಬರೂ ರೆಬೆಲ್ ಆಗಿ ಧುಮುಕಿದ್ದಾರೆ.
ಈ ಬಂಡಾಯ ಅಭ್ಯರ್ಥಿಗಳ ಭಾರೀ ಉಪಸ್ಥಿತಿಯು ಉಭಯ ಮೈತ್ರಿಕೂಟಗಳ ಮತಗಳನ್ನು ಸೀಳಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಇದು ಭೀಕರ ರಾಜಕೀಯ ಪರಿಣಾಮ ಬೀರಲಿದೆ,(ಏಜೆನ್ಸೀಸ್).