ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನಿಂದ ಬಂಡಾಯವೆದ್ದು ಎನ್‌ಸಿಪಿಐ ಸೇರಿದ್ದ 20 ಬಂಡಾಯ ಸಂಸದರು(Rebel TMC MPs), ಮಂಗಳವಾರ(ಜು. 28) ಮೊದಲ ಬಾರಿಗೆ ಎನ್ಡಿಎ ಸಭೆಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ ಬಣದ ಸಂಸದರು ಕಿಡಿಕಾರಿದ್ದಾರೆ.
'ಮಂಗಲ್ ಮಿಲನ್' ಎಂದು ಕರೆಯಲ್ಪಡುವ ಈ ಸಾಪ್ತಾಹಿಕ ಸಭೆಯು ಹೌಸ್ ಲೈಬ್ರರಿ ಕಟ್ಟಡದೊಳಗಿನ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯುತ್ತಿತ್ತು. ಎನ್‌ಸಿಪಿಐ ಪರವಾಗಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರಿಗೆ ಮೊದಲ ಸಾಲಿನಲ್ಲಿ ಅವಕಾಶ ನೀಡಲಾಗಿತ್ತು.
ಈ ಕುರಿತು ಮಾತನಾಡಿರುವ ಅವರು, ಎನ್‌ಸಿಪಿಐ ಅನ್ನು ಮೊದಲ ಬಾರಿಗೆ ಸಭೆಗೆ ಆಹ್ವಾನಿಸಲಾಗಿದೆ. ದೇಶದ ಪ್ರಗತಿಯ ಬಗ್ಗೆ, ಎಫ್‌ಟಿಎಗಳ ಬಗ್ಗೆ, ರೈತರ ಬಗ್ಗೆ ನಮಗೆ ತಿಳಿದುಬಂದಿತು. ನಮಗೆ ಸಿಕ್ಕಿರುವ ದತ್ತಾಂಶದಿಂದ, ಜನರಿಗೆ ಇವೆಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಸಂಸದೆ ಸಯೋನಿ ಘೋಷ್ ಸಹ, ಪ್ರಶ್ನೆ ಪತ್ರಿಕೆ ಸೋರಿಕೆ ಮಸೂದೆಯನ್ನು ಎಲ್ಲರೂ ಬೆಂಬಲಿಸಬೇಕು. ನಾವು FTA ಗಳ ಕುರಿತು ಚರ್ಚೆ ನಡೆಸಿದ್ದೇವೆ. ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ಇದು ಸಕಾರಾತ್ಮಕ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ.
ಮಮತಾ ಬಣದಿಂದ ಟೀಕೆ
ಎನ್ಡಿಎ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಬಣದ ಶಾಸಕ ಕುನಾಲ್ ಘೋಷ್ ಬಂಡಾಯ ಸಂಸದರ ವಿರುದ್ಧ ಕಿಡಿಕಾರಿದ್ದು, ಪಕ್ಷಾಂತರಗೊಂಡ ಸಂಸದರು ಬಿಜೆಪಿ ವಿರೋಧಿ ಮತಗಳಿಂದ ಗೆದ್ದಿದ್ದಾರೆ. ಅವರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಗೆ ದ್ರೋಹ ಬಗೆದಿದ್ದು ಮಾತ್ರವಲ್ಲದೆ, ಮತ ಹಾಕಿದ ಮತದಾರರಿಗೂ ವಂಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).