ಉದ್ದವ್ ಠಾಕ್ರೆ ಮತ್ತು ಪ್ರಧಾನಿ ಮೋದಿ 
ದೇಶ

ಬಂಡಾಯ ಸಂಸದರಿಗೆ ಅಭಯ; ಇದು ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರುವ ಸೂಚನೆ: ಪ್ರಧಾನಿ ಮೋದಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ | Uddhav Thackeray

ಮುಂಬೈ: ಪಕ್ಷದ ಗುರುತು ಮತ್ತು ಚುನಾವಣಾ ಚಿಹ್ನೆ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಬಂಡಾಯ ಸಂಸದರಿಗೆ ಯಾವುದೇ ಚಿಂತೆ ಮಾಡಬೇಡಿ, ನಿಮ್ಮ ಜೊತೆ ಇದ್ದೇನೆ ಎಂಬ ಅಭಯ ನೀಡಿರುವುದನ್ನು ಪ್ರಶ್ನಿಸಿರುವ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ(Uddhav Thackeray), ಇದು ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರುವ ಸೂಚನೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನಿವಾಸದಲ್ಲಿ ಟಿಎಂಸಿ ಮತ್ತು ಶಿವಸೇನೆಯ ಆರು ಬಂಡಾಯ ಸಂಸದರನ್ನು ಪ್ರತ್ಯೇಕವಾಗಿ ಉಪಹಾರಕ್ಕೆ ಕರೆದು ಮಾತನಾಡಿದ್ದರ ಕುರಿತು ಟೀಕಿಸಿರುವ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಪ್ರಧಾನಿಗೆ ಸಮಯವಿರಲಿಲ್ಲ, ಆದರೆ ಕ್ರಮ ಕೈಗೊಳ್ಳುವ ಸಾಧ್ಯತೆಯಿರುವ ದೇಶದ್ರೋಹಿ ಶಿವಸೇನಾ ಸಂಸದರನ್ನು ಬೇಗನೆ ಭೇಟಿ ಮಾಡಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಚಿಹ್ನೆ ಮತ್ತು ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಧೀಶರು ಏಕನಾಥ್ ಶಿಂಧೆ ಪಕ್ಷವನ್ನು ವಿಭಜಿಸಿದ ರೀತಿಯನ್ನು ಮೌಖಿಕವಾಗಿ ಟೀಕಿಸಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾನೂನಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಆದರೆ ಆಶ್ಚರ್ಯಕರವಾಗಿ ನಮ್ಮ ದೇಶದ ಪ್ರಧಾನಿ, ನಾಚಿಕೆಯಿಲ್ಲದ ಶಿವಸೇನಾ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರನ್ನು ಭೇಟಿ ಮಾಡಿ, ಅವರಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರು ಸುಪ್ರೀಂಕೋರ್ಟ್‌ಗೆ ಯಾವ ರೀತಿಯ ಸಂದೇಶವನ್ನು ಕಳುಹಿಸಲು ಬಯಸುತ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನ್ಯಾಯಾಲಯದ ಮೇಲೆ ಪರೋಕ್ಷ ಒತ್ತಡ ಹೇರುವ ತಂತ್ರ. ಆದರೆ ನ್ಯಾಯಾಲಯವು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ತನ್ನ ತೀರ್ಪನ್ನು ಪ್ರಕಟಿಸಬೇಕೆಂದು ನಾನು ವಿನಂತಿಸುತ್ತೇನೆ. ನಾವು ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ಗೌರವಿಸುತ್ತೇವೆ. ನಾಲ್ಕು ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ, ಇದು ತಪ್ಪು ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).