ಚಂಡೀಗಢ: ದೇಶದ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು ಎನ್ನಲಾಗುವ ಚಂಡೀಗಢದಲ್ಲಿ ಹಾಡಹಗಲೇ ಗುಂಡಿನ ಮಳೆ ಸುರಿಸಲಾಗಿದೆ. ಜಿಮ್ ಮುಗಿಸಿ ಹೊರಬಂದ 31 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್‌ಪ್ರೀತ್ ಸಿಂಗ್ ಅವರನ್ನು ದುಷ್ಕರ್ಮಿಗಳು ಕೇವಲ 10 ಸೆಕೆಂಡ್‌ಗಳಲ್ಲಿ 8 ಬಾರಿ ಗುಂಡು ಹಾರಿಸಿ ಬಲಿಪಡೆದಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಬುಧವಾರ ಬೆಳಗ್ಗೆ ಚರಣ್‌ಪ್ರೀತ್ ಸಿಂಗ್ ಜಿಮ್ ಮುಗಿಸಿ ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ಮರಳಲು ಸಿದ್ಧರಾಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧರಿಸಿದ ಶೂಟರ್‌ಗಳು ಚರಣ್‌ಪ್ರೀತ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಕಾರಿನ ಗಾಜಿನ ಮೂಲಕವೇ ಸತತವಾಗಿ 8 ಸುತ್ತು ಗುಂಡು ಹಾರಿಸಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ; ರಕ್ತದ ಮಡುವಿನಲ್ಲಿ ಬಿದ್ದ ಚರಣ್‌ಪ್ರೀತ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಸಾವನ್ನಪ್ಪಿದ್ದಾರೆ.
ಹತ್ಯೆಯ ಹಿಂದೆ ಗ್ಯಾಂಗ್‌ಸ್ಟರ್ ಕೈವಾಡ?
ಘಟನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್ ಪೊಲೀಸರನ್ನು ಕಂಗಾಲಾಗಿಸಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಲಕ್ಕಿ ಪಟಿಯಲ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಚರಣ್‌ಪ್ರೀತ್ ತಮ್ಮ ಗ್ಯಾಂಗ್‌ನ ಮಾಹಿತಿಯನ್ನು ಪ್ರತಿಸ್ಪರ್ಧಿ ಗ್ಯಾಂಗ್‌ಗಳಿಗೆ ರವಾನಿಸುತ್ತಿದ್ದ (Informer), ಈ ಕಾರಣಕ್ಕಾಗಿಯೇ ಅವನನ್ನು ಮುಗಿಸಿದ್ದೇವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
24 ಗಂಟೆಯಲ್ಲಿ 2ನೇ ಶೂಟೌಟ್!
ಚಂಡೀಗಢದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ. ಮಂಗಳವಾರವಷ್ಟೇ ಪಂಜಾಬ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ನಾಯಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ಈಗ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಯಾಗಿರುವುದು ಚಂಡೀಗಢದಾದ್ಯಂತ ಹೈ-ಅಲರ್ಟ್ ಘೋಷಿಸಲು ಕಾರಣವಾಗಿದೆ,(ಏಜೆನ್ಸೀಸ್).