ರಿಯಲ್ ಎಸ್ಟೇಟ್ ಉದ್ಯಮಿ ಅಮಿತ್ ಕತ್ಯಾಲ್
ನವದೆಹಲಿ; ಹರಿಯಾಣದ ಗುರುಗ್ರಾಮ್ನಲ್ಲಿ ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಆಪ್ತರು ಎನ್ನಲಾದ ರಿಯಲ್ ಎಸ್ಟೇಟ್ ಉದ್ಯಮಿ ಅಮಿತ್ ಕತ್ಯಾಲ್ ಅವರನ್ನು ಜಾರಿ ನಿರ್ದೇಶನಾಲಯ(ED) ಬಂಧಿಸಿದೆ(Arrest) ಎಂದು ಬುಧವಾರ(ನ. 19) ವರದಿಯಾಗಿದೆ.
ಗುರುಗ್ರಾಮದ ಸೆಕ್ಟರ್ 70ರಲ್ಲಿ 14 ಎಕರೆಗಳಲ್ಲಿ ನಿರ್ಮಿಸಲಾದ ಕ್ರಿಶ್ ಫ್ಲಾರೆನ್ಸ್ ಎಸ್ಟೇಟ್‌ನಲ್ಲಿ ಫ್ಲಾಟ್‌ಗಳನ್ನು ವಿತರಿಸದೇ ಮನೆ ಖರೀದಿದಾರರಿಗೆ 500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪ ಪ್ರಕರಣ ಇದಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಯೋಜನೆಯನ್ನು ಕತ್ಯಾಲ್ ಅವರ ಕಂಪನಿಯಾದ ಆಂಗಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿತ್ತು ಎನ್ನಲಾಗಿದೆ.
ಜಾರಿ ನಿರ್ದೇಶನಾಲಯದ ಗುರುಗ್ರಾಮ್ ವಲಯ ಅಧಿಕಾರಿಗಳು ಸೋಮವಾರ ಕತ್ಯಾಲ್ ಅವರನ್ನು ಪಿಎಂಎಲ್‌ಎ ಅಡಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದು, ವಿಶೇಷ ನ್ಯಾಯಾಲಯವು ಆರು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಇತರ ಕುಟುಂಬ ಸದಸ್ಯರನ್ನು ಒಳಗೊಂಡ ರೈಲ್ವೆಯ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಹಣ ವರ್ಗಾವಣೆ ಪ್ರಕರಣದಲ್ಲಿ 2023ರಲ್ಲಿ ಕತ್ಯಾಲ್ ಅವರನ್ನು ಇಡಿ ಬಂಧಿಸಿತ್ತು (ಏಜೆನ್ಸೀಸ್).