ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸುತ್ತಿದ್ದಂತೆ, ಬುಧವಾರ(ಜು. 22) ಕೇಂದ್ರ ಸರ್ಕಾರ ಸಂಸತ್ನಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಒಪ್ಪಿಕೊಂಡಿದೆ.
ಈ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆಯೇ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju), ಲೋಕಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದ ಬಗ್ಗೆ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳೇ ನಮ್ಮ ಪ್ರಮುಖ ಆದ್ಯತೆ. ನೀಟ್ ಪತ್ರಿಕೆ ಸೋರಿಕೆ ವಿಷಯದ ಕುರಿತು ಸದನದಲ್ಲಿ ವಿವರವಾದ ಚರ್ಚೆಯನ್ನು ನಾವು ಬಯಸುತ್ತೇವೆ ಎಂದರು. ಆದ್ಯಾಗೂ ಪ್ರತಿಪಕ್ಷಗಳ ನಾಯಕರು, ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ದೌರ್ಜನ್ಯದ ವಿಷಯವನ್ನು ಎತ್ತಿ ಈ ಸಂಬಂಧ ಪ್ರಧಾನಿ ಮೋದಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಮಂಗಳವಾರ ಪ್ರಧಾನಿಯವರ ಮನೆಯ ಹೊರಗೆ ನಡೆದ ಧರಣಿಯನ್ನು ಉಲ್ಲೇಖಿಸಿ, ಪ್ರಧಾನಿಯವರು ಸಂಸತ್ತಿನಲ್ಲಿ ಮಾತನಾಡದ ಕಾರಣ ಅವರ ನಿವಾಸದಲ್ಲಿ ಧರಣಿ ನಡೆಸಬೇಕಾಯಿತು ಎಂದು ತಿಳಿಸಿದರು.
ಪ್ರಧಾನಿಯವರು ಸಂಸತ್ತಿನ ಹೊರಗೆ ಯುವಜನರ ವಿಷಯದ ಬಗ್ಗೆ ಮಾತನಾಡುತ್ತಾರೆ. ಅವರು ಸದನದಲ್ಲಿ ಏಕೆ ಹೇಳಿಕೆ ನೀಡಬಾರದು?, ರಾಜಧಾನಿಯ ಬೀದಿಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಸರ್ಕಾರ ಅದಕ್ಕೆ ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.
ನೀಟ್ ಪರೀಕ್ಷೆ ಸೋರಿಕೆ ಬಗ್ಗೆ ಸರ್ಕಾರ ಚರ್ಚೆಗೆ ಒಪ್ಪಿಕೊಂಡರು, ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಮುನ್ನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರಿಂದ ಎರಡೂ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ (ಏಜೆನ್ಸೀಸ್).