Asaduddin Owaisi | ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ( ಸಂಗ್ರಹ ಚಿತ್ರ)
ಪಟನಾ: ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಸೀಮಾಂಚಲ್ ಪ್ರದೇಶಕ್ಕೆ ನ್ಯಾಯ ದೊರಕಿಸಿಕೊಟ್ಟರೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಬೆಂಬಲಿಸಲು ಸಿದ್ಧ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಬಿಹಾರದ ಅಮೌರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಒವೈಸಿ, ಅಭಿವೃದ್ಧಿ ಎನ್ನುವುದು ಕೇವಲ ಪಾಟ್ನಾ ಮತ್ತು ಪ್ರವಾಸಿ ತಾಣವಾದ ರಾಜ್‌ಗೀರ್‌ಗೆ ಮಾತ್ರ ಸೀಮಿತವಾಗಿರಬಾರದು ಎಂದು ಎಂದಿದ್ದಾರೆ.
ಅಭಿವೃದ್ದಿ ಎನ್ನುವುದು ಕೇವಲ ಪಾಟ್ನಾ ಮತ್ತು ರಾಜಗೀರ್ ಸುತ್ತ ಎಷ್ಟು ಕಾಲ ಕೇಂದ್ರೀಕೃತವಾಗಿರುತ್ತದೆ? ಸೀಮಾಂಚಲ್, ನದಿ ಸವೆತ, ದೊಡ್ಡ ಪ್ರಮಾಣದ ವಲಸೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಬಳಲುತ್ತಿದೆ. ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಬೇಕು ಒಂದು ವೇಳೆ ಹೀಗೆ ಮಾಡಿದರೆ, ನಮ್ಮ ಪಕ್ಷದ ಶಾಸಕರು ನಿತೀಶ್ ಕುಮಾರ್ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ಸೀಮಾಂಚಲ್ ಪ್ರದೇಶದಲ್ಲಿ 5 ಸ್ಥಾನಗಳು..
ಬಿಹಾರದ ಈಶಾನ್ಯ ಭಾಗದಲ್ಲಿರುವ ಸೀಮಾಂಚಲ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಜನರಿದ್ದು, ಇದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದೆ. ಕೋಸಿ ನದಿಯ ಉಕ್ಕಿ ಹರಿಯುವಿಕೆಯಿಂದಾಗಿ ಈ ಪ್ರದೇಶವು ಪ್ರತಿವರ್ಷ ಪ್ರವಾಹಕ್ಕೆ ಒಳಗಾಗುತ್ತದೆ. ಸೀಮಾಂಚಲದ ಜನಸಂಖ್ಯೆಯ ಸುಮಾರು 80% ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ.
ಸೀಮಾಂಚಲ್ ಪ್ರದೇಶದ 24 ಕ್ಷೇತ್ರಗಳು ಎನ್‌ಡಿಎ ಜೊತೆಗಿದ್ದು, ಬಿಹಾರದಲ್ಲಿ ಈ ಭರ್ಜರಿ ಗೆಲುವಿನ ಹೊರತಾಗಿಯೂ, ಓವೈಸಿ ನೇತೃತ್ವದ ಎಐಎಂಐಎಂ ಈ ಪ್ರದೇಶದಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿದ್ದು , ಐದು ಸ್ಥಾನಗಳನ್ನು ಗೆದ್ದಿದೆ. ಈ ಬಾರಿ, ಓವೈಸಿ ತಮ್ಮ ಪಕ್ಷದ ಶಾಸಕರನ್ನು ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ಐದು ಶಾಸಕರು ವಾರಕ್ಕೆ ಎರಡು ಬಾರಿ ತಮ್ಮ ತಮ್ಮ ಕ್ಷೇತ್ರದ ಕಚೇರಿಗಳಲ್ಲಿ ಕುಳಿತು ತಮ್ಮ ಲೈವ್ ವಾಟ್ಸಾಪ್ ಸ್ಥಳದೊಂದಿಗೆ ಫೋಟೋಗಳನ್ನು ನನಗೆ ಕಳುಹಿಸುತ್ತಾರೆ. ಅದು ಅವರು ಎಲ್ಲಿದ್ದಾರೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ ಎಂದಿದ್ದಾರೆ(ಏಜೆನ್ಸೀಸ್).