Newspapers Reading 
ದೇಶ

ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದುವುದು ಕಡ್ಡಾಯ | Newspapers Reading

ಲಖನೌ: ಪುಸ್ತಕ ಜ್ಞಾನದ ಜೊತೆಗೆ ಲೋಕದ ಜ್ಞಾನವು ಮುಖ್ಯ ಎಂದು ಮನಗಂಡಿರುವ ಉತ್ತರ ಪ್ರದೇಶ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದು, ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು ಎನ್ನುವ ದೃಷ್ಟಿಯಿಂದ ಪ್ರತಿದಿನ ಬೆಳಿಗ್ಗೆ ಪತ್ರಿಕೆಗಳನ್ನು ಸಹ ಓದಬೇಕು ಎಂದು ಕಟ್ಟಪ್ಪಣೆ ಹೊರಡಿಸಿದೆ.
ಮೊಬೈಲ್ ಫೋನ್‌ ಸೇರಿದಂತೆ ಇತರ ಡಿಜಿಟಲ್ ಮಾಯಾಜಾಲದಿಂದ ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಗಟ್ಟಲು ಪಣತೊಟ್ಟಂತಿರುವ ಯೋಗಿ ಸರ್ಕಾರ, ದಿನ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಿದೆ.
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು ಸುಧಾರಿಸಲು ಯೋಗಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶಗಳನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಓದುವ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಗ್ಯಾಜೆಟ್‌ಗಳ ವ್ಯಸನದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಇದರಿಂದ ಬಚಾವ್​ ಮಾಡುವ ಉದ್ದೇಶ ಪರದೆಯ ಸಮಯವನ್ನು ಕಡಿಮೆ ಮಾಡುವುದಾಗಿದೆ.

ಪ್ರಾರ್ಥನೆ ವೇಳೆ 10 ನಿಮಿಷ 'ಸುದ್ದಿ ಸಮಯ'

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥಸಾರಥಿ ಸೇನ್ ಶರ್ಮಾ ಡಿಸೆಂಬರ್ 23 ರಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಶಾಲಾ ಸಭೆಯಲ್ಲಿ ಪತ್ರಿಕೆ ಓದಲು 10 ನಿಮಿಷಗಳ ಸಮಯವನ್ನು ನಿರ್ದಿಷ್ಟವಾಗಿ ನಿಗದಿಪಡಿಸಬೇಕು. ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಮತ್ತು ಸಂಪಾದಕೀಯ ಲೇಖನಗಳಿಂದ ಪ್ರಮುಖ ಅಂಶಗಳನ್ನು ಸರದಿ ಆಧಾರದ ಮೇಲೆ ಪಠಿಸಬೇಕಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಶಾಲಾ ಸಂಸ್ಕೃತಿಯ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರವು ವಿದ್ಯಾರ್ಥಿಗಳಿಗೆ ಈ ಹೊಸ ಕಾರ್ಯಕ್ರಮದ ಪ್ರಯೋಜನಗಳನ್ನು ಬಹಿರಂಗಪಡಿಸಿದ್ದು. ನಿಯಮಿತವಾಗಿ ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಇದು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಂಪಾದಕೀಯಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಶಬ್ದಕೋಶವನ್ನು ಸುಧಾರಿಸುವುದಲ್ಲದೆ, ಅವರ ಬರವಣಿಗೆಯ ಕೌಶಲ್ಯವನ್ನು ಸಹ ಹೆಚ್ಚಿಸುತ್ತದೆ. ಮಕ್ಕಳು ವಿವಿಧ ದೃಷ್ಟಿಕೋನಗಳಿಂದ ಸುದ್ದಿಗಳನ್ನು ವಿಶ್ಲೇಷಿಸಿದಾಗ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.
ಸ್ಥಳೀಯ ಮತ್ತು ಸಾಮಾಜಿಕ ಸಮಸ್ಯೆಗಳು, ಸರ್ಕಾರದ ಯೋಜನೆಗಳು ಬಗ್ಗೆ ತಿಳಿದುಕೊಳ್ಳುವ ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ. ಪತ್ರಿಕೆಗಳಲ್ಲಿ ಬರುವ ಸುಡೋಕು ಮತ್ತು ಕ್ರಾಸ್‌ವರ್ಡ್ ಪದಬಂಧಗಳು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ತಾರ್ಕಿಕ ಚಿಂತನೆಯನ್ನು ಹೆಚ್ಚಿಸುತ್ತವೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ(ಏಜೆನ್ಸೀಸ್​).