ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ
ಬೆಂಗಳೂರು: 2025ರ ಐಪಿಎಲ್ ಆವತ್ತಿಯಲ್ಲಿ ಆರ್ಸಿಬಿ ವಿಜಯೋತ್ಸದ ವೇಳೆ ಕಾಲ್ತುಳಿತ ನಡೆದು ಮಕ್ಕಳು ಸೇರಿ 11 ಮಂದಿ ಮೃತಪಟ್ಟ ದುರ್ಘಟನೆ ಮರುಕಳಿಸದಂತೆ ಮಾ. 28ರಂದು ಆರಂಭವಾಗಲಿರುವ ಆರ್ಸಿಬಿ-ಎಸ್ಆರ್ಹೆಚ್ ಪಂದ್ಯದ ವೇಳೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮಾ. 28 ಮತ್ತು ಏ. 05ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೂನ್ಯ ಸಹಿಷ್ಣುತೆಯನ್ನು ವಹಿಸುತ್ತಿದ್ದು, ಪಂದ್ಯಾವಳಿ ದಿನ ಟಿಕೆಟ್ ಇದ್ದರೆ ಮಾತ್ರ ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಪಂದ್ಯ ಆರಂಭವಾಗುವ 4 ಗಂಟೆ ಮೊದಲೇ ಎಲ್ಲಾ ಗೇಟ್ಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಂದ್ಯದ ದಿನ ಕ್ರೀಡಾಭಿಮಾನಿಗಳು ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಉತ್ತಮ. ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಟಿಕೆಟ್ ಇಲ್ಲದೇ ಕ್ರೀಡಾಂಗಣದ ಕಡೆ ಯಾರೂ ಬರೋದು ಬೇಡ. ದಟ್ಟಣೆ ನಿಯಂತ್ರಣಕ್ಕಾಗಿ ಮೂರು ನಿಮಿಷಕ್ಕೊಂದು ಮೆಟ್ರೋ ಸೇವೆ ನೀಡಲು ಪೊಲೀಸ್ ಇಲಾಖೆ ಬಿಎಂಆರ್ಸಿಎಲ್ಗೆ ಮನವಿ ಮಾಡಿಕೊಂಡಿದೆ ಎಂದಿದ್ದಾರೆ.
ತುರ್ತು ಪರಿಸ್ಥಿತಿಗೆ ಆಂಬ್ಯುಲೆನ್ಸ್ ಸೇವೆ
ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆಗಾಗಿ ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡಗಳನ್ನು ನಿಯೋಜಿಸಲಾಗಿದೆ. ಪಂದ್ಯದ ದಿನ ಕ್ರೀಡಾಂಗಣದ ಸುತ್ತಲೂ ಪೊಲೀಸರ ಕಣ್ಗಾವಲು ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲಾಗುತ್ತದೆ ಎಂದು ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಫ್ರೀ
ಬಿಎಂಆರ್ಸಿಎಲ್ ಜೊತೆ ಕೆಎಸ್ಸಿಎ ಮತ್ತು ಆರ್ಸಿಬಿ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದ್ದು, ಆರ್ಸಿಬಿ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆದುಕೊಂಡ ಅಭಿಮಾನಿಗಳು ಆ ದಿನ ಬೆಂಗಳೂರಿನ ಎಲ್ಲ ಮೆಟ್ರೋ ಮಾರ್ಗಗಳಲ್ಲಿ ಫ್ರೀಯಾಗಿ ಸಂಚರಿಸಬಹುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಕಮಿಷನರ್ ಸಹ ಸ್ಪಷ್ಟಪಡಿಸಿದ್ದಾರೆ.
ಮಾ. 28ರಂದು ನಡೆಯುವ ಪಂದ್ಯದ ಟಿಕೆಟ್ ಅನ್ನು ಇಂದಿನಿಂದ ಕಾಯ್ದಿರಿಸಬಹುದಾಗಿದ್ದು, ಅಧಿಕೃತ ವೆಬ್ಸೈಟ್(https://shop.royalchallengers.com/ticket) ಟಿಕೆಟ್ ಅನ್ನು ಖರೀದಿಸಬಹುದು.