RCBvGT: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗುವತ್ತ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಮಂಗಳವಾರ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ವಾಲಿಫೈಯರ್ 1 ರ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಜಯ ಸಾಧಿಸುವ ಮೂಲಕ ಆರ್‌ಸಿಬಿ ಸತತ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫೈನಲ್‌ಗೆ ಅದ್ಧೂರಿಯಾಗಿ ಪ್ರವೇಶ ಪಡೆದಿದೆ.
ರಜತ್ ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್: ದಾಖಲೆಯ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ರಜತ್ ಪಾಟೀದಾರ್ ಆನೆಬಲ ತಂದಿತ್ತರು. ಆರಂಭದಿಂದಲೇ ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಾಟೀದಾರ್, ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಮಳೆ ಹರಿಸಿದರು. ಜವಾಬ್ದಾರಿಯುತ ಹಾಗೂ ಅಷ್ಟೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ 39 ಎಸೆತಗಳಲ್ಲಿ ಅಜೇಯ 93 ರನ್ ಚಚ್ಚಿದರು. ಪಾಟೀದಾರ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 254 ರನ್‌ಗಳ ದಾಖಲೆಯ ಬೃಹತ್ ಮೊತ್ತವನ್ನು ಪೇರಿಸಿತು.
ಟೈಟನ್ಸ್ ಬ್ಯಾಟಿಂಗ್ ಲೈನ್-ಅಪ್ ಧೂಳೀಪಟ ಮಾಡಿದ ಆರ್‌ಸಿಬಿ ಪೇಸರ್ಸ್
255 ರನ್‌ಗಳ ಬಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ವೇಗಿಗಳು ಆರಂಭದಲ್ಲೇ ಆಘಾತ ನೀಡಿದರು. ಕರಾರುವಾಕ್ ಲೈನ್ ಅಂಡ್ ಲೆನ್ತ್ ಮೂಲಕ ದಾಳಿ ನಡೆಸಿದ ಬೆಂಗಳೂರು ತಂಡದ ಪೇಸರ್‌ಗಳು ಗುಜರಾತ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ರನ್ ಗಳಿಸಲು ಪರದಾಡಿದ ಟೈಟನ್ಸ್ ದಾಂಡಿಗರು ಆರ್‌ಸಿಬಿ ಬೌಲಿಂಗ್ ತಂತ್ರಕ್ಕೆ ಸಂಪೂರ್ಣ ಶರಣಾದರು. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಗುಜರಾತ್ ತಂಡ ಅಂತಿಮವಾಗಿ 162 ರನ್‌ಗಳಿಗೆ ಸರ್ವಪತನ ಕಂಡಿತು.
ತೆವಾಟಿಯಾ ಹೋರಾಟ ವ್ಯರ್ಥ
ಗುಜರಾತ್ ಟೈಟನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ, ಕೊನೆಯ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಐಪಿಎಲ್ ವೃತ್ತಿಜೀವನದ ತಮ್ಮ ಅತ್ಯುನ್ನತ ಸ್ಕೋರ್ ದಾಖಲಿಸಿದ ಅವರು, ಆಕರ್ಷಕ ಅರ್ಧಶತಕ (68 ರನ್) ಸಿಡಿಸಿ ಮಿಂಚಿದರು. ಆದರೆ, ತೆವಾಟಿಯಾ ಅಬ್ಬರದ ಬ್ಯಾಟಿಂಗ್ ಆರಂಭಿಸುವ ಹೊತ್ತಿಗಾಗಲೇ ಪಂದ್ಯದ ಗತಿ ಆರ್‌ಸಿಬಿ ಪರವಾಗಿ ವಾಲಿತ್ತಾದರೂ ಗುಜರಾತ್ ತಂಡದ ಸೋಲಿನ ಅಂತರವನ್ನು (ರನ್ ರೇಟ್ ದೃಷ್ಟಿಯಿಂದ) ಕೊಂಚ ತಗ್ಗಿಸುವಲ್ಲಿ ಯಶಸ್ವಿಯಾಯಿತು.
ಈ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಪ್ರಶಸ್ತಿ ಸುತ್ತಿಗೆ ನೇರ ಪ್ರವೇಶ ಪಡೆದಿದ್ದು, ಅಭಿಮಾನಿಗಳಲ್ಲಿ ಈ ಸಲ ಕಪ್ ನಮ್ದೇ ಎಂಬ ಭರವಸೆ ಮತ್ತಷ್ಟು ಗಟ್ಟಿಯಾಗಿದೆ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಬೆಂಗಳೂರು ತಂಡ, ಈ ಬಾರಿಯೂ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದೆ(ಏಜೆನ್ಸೀಸ್).