RCBvsGT | ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್ 
ದೇಶ

ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್​; ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ...ಗಿಲ್​ ಪಡೆಗೆ 255 ರನ್​ಗಳ ಬಿಗ್​ ಟಾರ್ಗೆಟ್​ | RCBvsGT

RCBvsGT: ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುನಾಮಿಯೇ ಎದ್ದಿದ್ದು, 19ನೇ ಆವೃತಿಯ ಐಪಿಎಲ್ ಕ್ವಾಲಿಫೈಯರ್ 1 ಮಹಾಸಮರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಆರ್​ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು, ಇದು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ಗರಿಷ್ಠ ಸ್ಕೋರ್ ಎಂಬ ಹೊಸ ಇತಿಹಾಸ ಸೃಷ್ಟಿಸಿದ್ದು, 2023ರ ಐಪಿಎಲ್‌ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಅಹಮದಾಬಾದ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡವು ದಾಖಲಿಸಿದ್ದ 233/3 ರನ್‌ಗಳ ಹಿಂದಿನ ಪ್ಲೇಆಫ್ ದಾಖಲೆಯನ್ನು ಆರ್​ಸಿಬಿ ಇಂದು ಧೂಳೀಪಟ ಮಾಡಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ನೇರವಾಗಿ ಐಪಿಎಲ್ 2026ರ ಫೈನಲ್‌ಗೆ ಪ್ರವೇಶಿಸಲಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್​ ಮಾಡಲು ನಿರ್ಧರಿಸಿದ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಲೆಕ್ಕಾಚಾರವನ್ನು ಆರ್​ಸಿಬಿ ಬ್ಯಾಟರ್‌ಗಳು ತಲೆಕೆಳಗಾಗಿಸಿದರು. ಮೈದಾನಕ್ಕಿಳಿದ ನಾಯಕ ರಜತ್ ಪಾಟೀದಾರ್ ಜಿಟಿ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಕೇವಲ 33 ಎಸೆತಗಳನ್ನು ಎದುರಿಸಿದ ಅವರು, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ 93 ರನ್ ಕಲೆಹಾಕಿದರು.

ಕಿಂಗ್ ಕೊಹ್ಲಿ ಮತ್ತೊಂದು ದಾಖಲೆ!

ಮತ್ತೊಂದೆಡೆ, ರನ್ ಮಷಿನ್ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 43 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ ನಾಲ್ಕು ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಕೃಣಾಲ್ ಪಾಂಡ್ಯ ಕೂಡ 43 ರನ್‌ಗಳ ಉಪಯುಕ್ತ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 250ರ ಗಡಿ ದಾಟಲು ಪ್ರಮುಖ ಕಾರಣರಾದರು.

ಪ್ಲೇಆಫ್ಸ್‌ನಲ್ಲಿ ದಾಖಲೆಗಳ ಉಡೀಸ್

ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಸಾಮಾನ್ಯವಾಗಿ ಭಾರಿ ಒತ್ತಡ ಇರುತ್ತದೆ. ಆದರೆ ಆ ಒತ್ತಡವನ್ನೆಲ್ಲ ಗಾಳಿಗೆ ತೂರಿದ ಆರ್​ಸಿಬಿ ಬ್ಯಾಟರ್‌ಗಳು ಇಂದು ಧರ್ಮಶಾಲಾ ಮೈದಾನದಲ್ಲಿ ರನ್‌ ಮಳೆಯನ್ನೆ ಹರಿಸಿದರು. ಆರಂಭದಿಂದಲೇ ಜಿಟಿ ಬೌಲಿಂಗ್ ವಿಭಾಗದ ಮೇಲೆ ಸವಾರಿ ಮಾಡಿದ ಬೆಂಗಳೂರು ಪಡೆ, ಪ್ಲೇಆಫ್ ಇತಿಹಾಸದಲ್ಲೇ ಮೊದಲ ಬಾರಿಗೆ 250ರ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರವಾಯಿತು(ಏಜೆನ್ಸೀಸ್​​).