ಫೈನಲ್‌ಗೆ ಆರ್‌ಸಿಬಿ ಲಗ್ಗೆ; ರಜತ್ ಪಾಟೀದಾರ್ ಆರ್ಭಟಕ್ಕೆ ಗೇಲ್-ಸೂರ್ಯವಂಶಿ ದಾಖಲೆ ಉಡೀಸ್!
ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳಿಗೆ ಇದು ಅಕ್ಷರಶಃ ಹಬ್ಬದ ಸಮಯವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ ಹೈ-ವೋಲ್ಟೇಜ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು 92 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲೇ ಇದ ಮೊದಲ ಬಾರಿಗೆ ಸತತ ಎರಡನೇ ವರ್ಷ ಫೈನಲ್ ತಲುಪಿ ಐತಿಹಾಸಿಕ ಸಾಧನೆ ಮಾಡಿದೆ. ಆರ್‌ಸಿಬಿ ತಂಡದ ಈ ದಿಗ್ವಿಜಯದ ಮಹಾ ನಾಯಕನಾಗಿ ಮೂಡಿಬಂದ ಕ್ಯಾಪ್ಟನ್ ರಜತ್ ಪಾಟೀದಾರ್(RajatPatidar), ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು, ಪ್ಲೇಆಫ್ ಇತಿಹಾಸದಲ್ಲೇ ದಾಖಲೆಯ ಗರಿಷ್ಠ ಮೊತ್ತವಾದ 254/5 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ನಾಯಕನ ಆಟವಾಡಿದ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ ಭೀಕರ 9 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದರು.
ವೈಭವ್ ಸೂರ್ಯವಂಶಿ ಮತ್ತು ಕ್ರಿಸ್ ಗೇಲ್ ದಾಖಲೆ ಬ್ರೇಕ್!
ಈ ಪಂದ್ಯದಲ್ಲಿ ಪಾಟೀದಾರ್ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 281.82 ಆಗಿತ್ತು. ಈ ಮೂಲಕ ಐಪಿಎಲ್ ಇನಿಂಗ್ಸ್ ಒಂದರಲ್ಲಿ 90 ಪ್ಲಸ್ ರನ್ ಗಳಿಸಿದ ಆಟಗಾರರ ಪೈಕಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿದ ವಿಶ್ವದಾಖಲೆಯನ್ನು ಪಾಟೀದಾರ್ ತಮ್ಮ ಹೆಸರಿಗೆ ಬರೆದುಕೊಂಡರು. ಇದೇ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 37 ಎಸೆತಗಳಲ್ಲಿ 103 ರನ್ (ಸ್ಟ್ರೈಕ್ ರೇಟ್ 278.38) ಸಿಡಿಸಿ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ನಿರ್ಮಿಸಿದ್ದ ದಾಖಲೆಯನ್ನು ಪಾಟೀದಾರ್ ಮುರಿದರು. ಅಷ್ಟೇ ಅಲ್ಲದೆ, ಆರ್‌ಸಿಬಿ ಪರ ಈ ಹಿಂದೆ ಕ್ರಿಸ್ ಗೇಲ್ (175 ರನ್, 265 ಸ್ಟ್ರೈಕ್ ರೇಟ್) ಹೊಂದಿದ್ದ ದಾಖಲೆಯೂ ಇತಿಹಾಸದ ಪುಟ ಸೇರಿತು.
ಆರ್‌ಸಿಬಿ ಇನಿಂಗ್ಸ್‌ನಲ್ಲಿ ಕಿಂಗ್ ವಿರಾಟ್ ಕೊಹ್ಲಿ (25 ಎಸೆತಗಳಲ್ಲಿ 43 ರನ್) ವೇಗದ ಆರಂಭ ನೀಡಿದರೆ, ಕೃನಾಲ್ ಪಾಂಡ್ಯ (28 ಎಸೆತಗಳಲ್ಲಿ 43 ರನ್) ನಾಯಕ ಪಾಟೀದಾರ್ ಜೊತೆಗೂಡಿ ಕೇವಲ 35 ಎಸೆತಗಳಲ್ಲಿ 95 ರನ್‌ಗಳ ಜತೆಯಾಟವು ಗುಜರಾತ್ ಬೌಲರ್‌ಗಳನ್ನು ಅಕ್ಷರಶಃ ಧೂಳೀಪಟ ಮಾಡಿತು. ಗುಜರಾತ್ ಪರ ಕಗಿಸೊ ರಬಾಡ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರು.
162 ರನ್‌ಗಳಿಗೆ ಗುಜರಾತ್ ಆಲ್‌ಔಟ್; ಆರ್‌ಸಿಬಿ ಬೌಲರ್‌ಗಳ ಡೆಡ್ಲಿ ಅಟ್ಯಾಕ್
255 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ವೇಗಿಗಳು ಪವರ್‌ಪ್ಲೇನಲ್ಲೇ 5 ವಿಕೆಟ್ ಕಡಿಯುವ ಮೂಲಕ ಭೀಕರ ಶಾಕ್ ನೀಡಿದರು. ಗುಜರಾತ್ ಪರ ರಾಹುಲ್ ತೆವಾಟಿಯಾ (43 ಎಸೆತಗಳಲ್ಲಿ 68 ರನ್) ಹೋರಾಟ ನಡೆಸಿದರಾದರೂ ಅದು ಸೋಲಿನ ಅಂತರವನ್ನು ಕಡಿಮೆ ಮಾಡಲಷ್ಟೇ ಸಾಧ್ಯವಾಯಿತು. ಅಂತಿಮವಾಗಿ ಗಿಲ್ ಪಡೆ 162 ರನ್‌ಗಳಿಗೆ ಸರ್ವಪತನ ಕಂಡಿತು. ಆರ್‌ಸಿಬಿ ಪರ ಜೇಕಬ್ ಡಫಿ (3-39) ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರೆ, ಭುವನೇಶ್ವರ್ ಕುಮಾರ್ (2-28), ರಸಿಖ್ ಸಲಾಮ್ ದಾರ್ (2-24) ಮತ್ತು ಕೃನಾಲ್ ಪಾಂಡ್ಯ (2-16) ತಲಾ ಎರಡು ವಿಕೆಟ್ ಕಿತ್ತು ಜಯದ ಹಾದಿಯನ್ನು ಸುಗಮಗೊಳಿಸಿದರು.
ಸತತ ಎರಡನೇ ಬಾರಿಗೆ ಫೈನಲ್ ತಲುಪಿ ಇತಿಹಾಸ ಬರೆದಿರುವ ಆರ್‌ಸಿಬಿ, ಈ ಬಾರಿ ಕಪ್ ಗೆದ್ದು ಈ ಸಲ ಕಪ್ ನಮ್ದೇ ಎಂಬ ಅಭಿಮಾನಿಗಳ ದಶಕಗಳ ಕನಸನ್ನು ನನಸು ಮಾಡಲಿದೆಯೇ ಎಂಬುದನ್ನು ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ,(ಏಜೆನ್ಸೀಸ್).