Dhirendra Krishna Shastri 
ದೇಶ

ಶ್ರೀರಾಮನ ಹಣ ಕದ್ದ ಆಧುನಿಕ ರಾವಣರಿಗೆ ಜೈಲು ಮಾತ್ರವಲ್ಲ, ದೈವಿಕ ಶಿಕ್ಷೆಯೂ ಗ್ಯಾರಂಟಿ!: ಧೀರೇಂದ್ರ ಕೃಷ್ಣ ಶಾಸ್ತ್ರಿ ಆಕ್ರೋಶ | Dhirendra Krishna Shastri

ಲಖನೌ: ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಮತ್ತು ಚಿನ್ನಾಭರಣ ದುರುಪಯೋಗವಾಗಿರುವ ಗಂಭೀರ ಆರೋಪದ ಕುರಿತು ಬಾಗೇಶ್ವರ್ ಧಾಮ್‌ನ ಮುಖ್ಯಸ್ಥ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shastri) ಪ್ರತಿಕ್ರಿಯೆ ನೀಡಿದ್ದು, ಈ ಘಟನೆಯು ವಿಶ್ವದಾದ್ಯಂತ ಇರುವ ಕೋಟ್ಯಂತರ ರಾಮಭಕ್ತರ ಅಪಾರ ನಂಬಿಕೆ ಮತ್ತು ಶ್ರದ್ಧೆಗೆ ಉಂಟುಮಾಡಿರುವ ಬಹುದೊಡ್ಡ ದ್ರೋಹ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಹಗರಣದಲ್ಲಿ ಭಾಗಿಯಾಗಿರುವ ಭ್ರಷ್ಟರು ಕಾನೂನಿನ ಶಿಕ್ಷೆಯ ಜೊತೆಗೆ ದೇವರ ಕ್ರೂರ ಶಿಕ್ಷೆಯನ್ನೂ ಎದುರಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ರೂಪ ಬದಲಿಸಿಕೊಂಡು ರಾವಣ ಮತ್ತೆ ಬಂದಿದ್ದಾನೆ

ರಾಮಾಯಣದ ಪ್ರಸಂಗವನ್ನು ಉಲ್ಲೇಖಿಸಿ ಮಾತನಾಡಿದ ಧೀರೇಂದ್ರ ಕೃಷ್ಣ ಶಾಸ್ತ್ರಿ, ರಾವಣ ಎಲ್ಲೂ ಹೋಗಿಲ್ಲ, ಆತ ಇಂದಿಗೂ ಇಲ್ಲೇ ಇದ್ದಾನೆ, ಕೇವಲ ತನ್ನ ರೂಪವನ್ನು ಬದಲಿಸಿಕೊಂಡಿದ್ದಾನೆ ಅಷ್ಟೇ. ಅಂದು ತ್ರೇತಾಯುಗದಲ್ಲಿ ರಾವಣನು ಮಾತಾ ಜಾನಕಿಯನ್ನು ಅಪಹರಿಸಿದ್ದ, ಆದರೆ ಇಂದು ಕಲಿಯುಗದಲ್ಲಿ ರಾಮಮಂದಿರದ ಕಾಣಿಕೆ ಪೆಟ್ಟಿಗೆಯಲ್ಲಿದ್ದ ಲಕ್ಷಾಂತರ ಭಕ್ತರ ಪವಿತ್ರ ನಂಬಿಕೆಯನ್ನು ಈ ಆಧುನಿಕ ರಾವಣರು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತನಾಡುತ್ತಾ ಭಾವುಕರಾದ ಶಾಸ್ತ್ರಿಗಳು, ಇದು ಕೇವಲ ಹಣದ ಕಳ್ಳತನವಲ್ಲ, ಬದಲಿಗೆ ಪ್ರಭು ಶ್ರೀರಾಮನ ಹೆಸರಿನಲ್ಲಿ ತನು-ಮನ-ಧನ ಸಮರ್ಪಿಸಿದ ಕೋಟಿ ಕೋಟಿ ಭಕ್ತರ ನಂಬಿಕೆಗೆ ಎಸಗಿದ ದ್ರೋಹವಾಗಿದೆ ಎಂದರು.

ಕಾನೂನು ಮತ್ತು ದೈವಿಕ ಶಿಕ್ಷೆ ಎರಡೂ ಕಾಯಂ

ರಾಮನ ಹೆಸರಿನಲ್ಲಿ ಬಂದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು ಯಾವುದೇ ಕಾರಣಕ್ಕೂ ಭಗವಂತನ ಶಾಪದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಶಾಸ್ತ್ರಿ ಎಚ್ಚರಿಸಿದ್ದಾರೆ. ಅಂದು ಸೀತಾಮಾತೆಯನ್ನು ಅಪಹರಿಸಿದ ರಾವಣ ತನ್ನ ಇಡೀ ವಂಶದೊಂದಿಗೆ ಸರ್ವನಾಶವಾದ. ಇಂದು ಕೋಟ್ಯಂತರ ಜನ ತಮ್ಮ ಬೆವರಿನ ಗಳಿಕೆಯನ್ನು ಶ್ರೀರಾಮನಿಗೆ ಕಾಣಿಕೆಯಾಗಿ ನೀಡಿದ್ದಾರೆ. ರಾಮಮಂದಿರದ ದೇಣಿಗೆಯನ್ನು ಕದ್ದ ಕಳ್ಳರು ಕಾನೂನಿನ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸುವುದಷ್ಟೇ ಅಲ್ಲ, ಭಗವಂತನ ನ್ಯಾಯಾಲಯದಲ್ಲಿ ಅವರಿಗೆ ಅತ್ಯಂತ ಕಠಿಣ ದೈವಿಕ ಶಿಕ್ಷೆಯಾಗುವುದು ನಿಶ್ಚಿತ. ಈ ಪಾಪದ ಕೆಲಸ ಮಾಡಿದ ಯಾರೊಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.

ಎಂಟು ಆರೋಪಿಗಳು ಜೈಲಿಗೆ, ಚಂಪತ್ ರಾಯ್ ರಾಜೀನಾಮೆ

ಇನ್ನೊಂದೆಡೆ, ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದು, ಜೂನ್ 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖಾಧಿಕಾರಿಗಳು ಇದುವರೆಗೆ ಆರೋಪಿಗಳಿಂದ 79.85 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಹಗರಣದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ(ಏಜೆನ್ಸೀಸ್​).