ಹೋಟೆಲ್​ ಅಡುಗೆ ಕೋಣೆಯ ದೃಶ್ಯ 
ದೇಶ

ಇಲಿ, ಜಿರಳೆ, ಗ್ರೀಸ್​... ಯಾವುದೇ ಮುಲಾಜಿಲ್ಲದೇ ಮುಂಬೈ ಹೋಟೆಲ್​ಗೆ ಬೀಗ ಜಡಿದ ಎಫ್​ಡಿಎ | Restaurant Licence

ಪ್ರಮುಖ ಮುಖ್ಯಾಂಶಗಳು

  • ಹೋಟೆಲ್ ರಾಧಾದ ಅಡುಗೆಮನೆಯಲ್ಲಿ ಆಹಾರ ಇಲಾಖೆಯ ಮೂಲ ನಿಯಮಗಳು ಉಲ್ಲಂಘನೆ
  • ಮೂಲ ನಿಯಮಗಳು ಉಲ್ಲಂಘನೆ ಬೆನ್ನಲ್ಲೇ ಮಳಿಗೆಯ ಲೈಸನ್ಸ್ ರದ್ದು
ಮುಂಬೈ: ಕಳೆದ ಕೆಲವು ತಿಂಗಳಿಂದ ಹೋಟೆಲ್​ ಮತ್ತು ಐಷಾರಾಮಿ ರೆಸ್ಟೋರೆಂಟ್​ಗಳಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ​ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ), ಇದೀಗ ಮಲಾಡ್ ವೆಸ್ಟ್‌ನಲ್ಲಿರುವ ಹೋಟೆಲ್ ರಾಧಾದ ಅಡುಗೆಮನೆಯಲ್ಲಿ ಆಹಾರ ಇಲಾಖೆಯ ಮೂಲ ನಿಯಮಗಳು ಉಲ್ಲಂಘನೆ ಆಗಿರುವುದು ಪತ್ತೆಯಾದ ಬೆನ್ನಲ್ಲೇ ಮಳಿಗೆಯ ಲೈಸನ್ಸ್ (Restaurant Licence)​ ರದ್ದುಗೊಳಿಸಿದೆ.
ಪ್ರಸ್ತುತ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಆಯುಕ್ತರಾಗಿ ಅಧಿಕಾರ ನಿರ್ವಹಿಸುತ್ತಿರುವ ತುಕಾರಂ ಮುಂಧೆ, ನಗರದ ಹೋಟೆಲ್​, ರೆಸ್ಟೋರೆಂಟ್​ ಹಾಗೂ ಆಹಾರ ಉತ್ಪನ್ನಗಳ ತಯಾರಿಕ ಘಟಕಗಳ ಮೇಲೆ ರೇಡ್​ ಮಾಡುವ ಮೂಲಕ ಸರಣಿ ರಿಯಾಲಿಟಿ ಚೆಕ್​ಗಿಳಿದು, ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಈ ರೇಡ್​ ಕೂಡ ಒಂದು ಬಲವಾದ ಸಾಕ್ಷಿ ಎನ್ನಬಹುದು.
ಆ.18ರಂದು ನಡೆದ ಕಾರ್ಯಾಚರಣೆಯ ಸಮಯದಲ್ಲಿ, ಅಧಿಕಾರಿಗಳು ಹೋಟೆಲ್​ನ ಅಡುಗೆ ಕೋಣೆಯಲ್ಲಿ ಇಲಿಗಳು ಮತ್ತು ಜಿರಳೆಗಳು ಓಡಾಡುತ್ತಿರುವುದುನ್ನು ಕಂಡಿದ್ದಾರೆ. ಸೀಲಿಂಗ್ ಬಳಿ ಕೆಲವು ಇಲಿಗಳನ್ನು ಗುರುತಿಸಿದ್ದು, ಮತ್ತೊಂದೆಡೆ, ತೆರೆದ ಒಳಚರಂಡಿ ವ್ಯವಸ್ಥೆಯು ಅಡುಗೆ ಮನೆಯೊಳಗೆ ಸಂಪರ್ಕ ಹೊಂದಿರುವುದು ದಾಳಿಯಲ್ಲಿ ಬಯಲಾಗಿದೆ.
ಅಡುಗೆ ಕೋಣೆಯಲ್ಲಿ ಎಣ್ಣೆ ಮತ್ತು ಗ್ರೀಸ್‌ನ ದಪ್ಪ ಪದರಗಳು, ನಿಂತ ನೀರಿನಿಂದ ಕೂಡಿರುವ ದುರ್ವಾಸನೆ, ಕೊಳಕು ಕೌಂಟರ್‌ಗಳು ಮತ್ತು ಜಿಡ್ಡುಗಟ್ಟಿದ ಪಾತ್ರೆಗಳು ಮತ್ತು ಆಹಾರ ಪದಾರ್ಥಗಳ ಶೇಖರಣೆಯಲ್ಲಿ ತೋರಿರುವ ನಿರ್ಲಕ್ಷ್ಯವನ್ನು ಅಧಿಕಾರಿಗಳು ಸ್ಪಷ್ಟಪಡಿಸಿಕೊಂಡಿದ್ದಾರೆ. ತಪಾಸಣೆಯಲ್ಲಿ ಓಪನ್​ ಡಸ್ಟ್‌ಬಿನ್‌ನ ಮೇಲೆ ಹಾಕಲಾದ ಟೋಸ್ಟರ್ ಕೂಡ ಪತ್ತೆಯಾಗಿದೆ. ಕೆಲವು ಆಹಾರ ಪದಾರ್ಥಗಳನ್ನು ಧೂಳು ಮತ್ತು ಕೊಳಕಿನ ಮಧ್ಯೆಯೇ ಸಂಗ್ರಹಿಸಿಡಲಾಗಿದೆ.
ಎಫ್​ಡಿಎ ಮಹಾರಾಷ್ಟ್ರದಾದ್ಯಂತ ಆಹಾರ ಸುರಕ್ಷತೆ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮುಂಬೈ ಮತ್ತು ರಾಜ್ಯದ ಹಲವಾರು ಹೋಟೆಲ್‌, ರೆಸ್ಟೋರೆಂಟ್‌ಗಳು ಮತ್ತು ಇತರ ಆಹಾರ ಸಂಸ್ಥೆಗಳಲ್ಲಿ ಆಹಾರ ಸುರಕ್ಷತೆಯ ಉಲ್ಲಂಘನೆಗಳು ಕಂಡುಬಂದಿವೆ. ಇತ್ತೀಚಿನ ಒಂದು ಕ್ರಮದಲ್ಲಿ, ಅಧಿಕಾರಿಗಳು 31 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ, ಸುಮಾರು 25 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ಐದು ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಿದ್ದಾರೆ,(ಏಜೆನ್ಸೀಸ್).