Birth to 4 Girls  
ದೇಶ

ಕನ್ನೌಜ್‌ನಲ್ಲಿ ಅಪರೂಪದ ಘಟನೆ: ಏಕಕಾಲದಲ್ಲಿ 4 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಕನ್ನೌಜ್: ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಚ್ಚರಿ ಮೂಡಿಸುವ ಅಪರೂಪದ ಘಟನೆ ನಡೆದಿದೆ.
ಹೌದು, ಸ್ಥಳೀಯ ನರ್ಸಿಂಗ್ ಹೋಂನಲ್ಲಿ 30 ವರ್ಷದ ಅನಿತಾ ಎಂಬ ಮಹಿಳೆ ನಾರ್ಮಲ್ ಡೆಲಿವರಿ ಮೂಲಕ ಏಕಕಾಲದಲ್ಲಿ ನಾಲ್ಕು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಘಟನೆಯಿಂದ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ತಥಿಯಾ ಪಟ್ಟಣದ ನಿವಾಸಿಯಾದ ಅನಿತಾ ಅವರನ್ನು ಡಿಸೆಂಬರ್ 20ರಂದು ಪತಿ ಅನುಜ್ ಸಿಂಗ್ ಅವರು ವೈಷ್ಣವಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಡಿಸೆಂಬರ್ 21ರಂದು ಹೆರಿಗೆ ನೋವು ತೀವ್ರಗೊಂಡಾಗ ನಾರ್ಮಲ್ ಡೆಲಿವರಿ ಪ್ರಕ್ರಿಯೆ ನಡೆಸಲಾಯಿತು. ಆಶ್ಚರ್ಯಕರವೆಂದರೆ, ಒಂದರ ಹಿಂದೆ ಒಂದು ಮಕ್ಕಳು ಜನಿಸಿದ್ದು, ಪ್ರತಿ ಮಗುವಿನ ಜನನಕ್ಕೂ ಎರಡರಿಂದ ಮೂರು ನಿಮಿಷಗಳ ಅಂತರವಿತ್ತು.ನಾಲ್ಕು ಹೆಣ್ಣು ಮಕ್ಕಳೂ ಆರೋಗ್ಯವಾಗಿದ್ದು, ಇಬ್ಬರು ಮಕ್ಕಳ ತೂಕ ಸುಮಾರು ಒಂದು ಕೆಜಿ ಇದ್ದರೆ, ಉಳಿದ ಇಬ್ಬರ ತೂಕ ಒಂದೂವರೆ ಕೆಜಿಗಿಂತ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅನಿತಾ ಅವರು ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದರು. ಈ ನಾಲ್ಕು ಮಕ್ಕಳ ಜನನದೊಂದಿಗೆ ಅವರು ಒಟ್ಟು ಏಳು ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ.
ವೈದ್ಯಕೀಯ ತಜ್ಞರ ಪ್ರಕಾರ, ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡುವುದು ಅತ್ಯಂತ ವಿರಳ. ಇಂತಹ ಘಟನೆಗಳು ಲಕ್ಷಾಂತರ ಜನನಗಳಲ್ಲಿ ಒಂದು ಬಾರಿ ಮಾತ್ರ ಸಂಭವಿಸುತ್ತವೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಈ ಸುದ್ದಿಯಿಂದ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).