ಪೊಲೀಸ್​ ಬೈಕ್​ ರ‍್ಯಾಪಿಡೋ‌ ಸೇವೆಗೆ ಬಳಕೆ 
ದೇಶ

ಪೊಲೀಸ್ ಬೈಕ್​ನಲ್ಲಿ ರ‍್ಯಾಪಿಡೋ‌ ರೈಡ್! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಎಸ್‌ಐ ವಿರುದ್ಧ ಕ್ರಮಕ್ಕೆ ಶಿಫಾರಸು | Rapido ride on police bike! Video goes viral on social media

ಹೈದರಾಬಾದ್: ತೆಲಂಗಾಣದ ವಾರಂಗಲ್‌ನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಬೈಕ್ ಅನ್ನು ತನ್ನ ಖಾಸಗಿ ರ‍್ಯಾಪಿಡೋ‌ ಸೇವೆಗೆ ಬಳಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಠಾಣೆಯ ಎಸ್​ಐ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬುಧವಾರ(ಆ. 05) ವರದಿಯಾಗಿದೆ.
ವಾರಂಗಲ್​ನ ಅಂಬೇಡ್ಕರ್ ಜಂಕ್ಷನ್‌ನಿಂದ ಸುಬೇದಾರಿಗೆ ಹೋಗಲು ರ‍್ಯಾಪಿಡೋ‌ ಬೈಕ್ ಬುಕ್​ ಮಾಡಿದ್ದ. ಪ್ರಯಾಣಿಕನನ್ನು ಕರೆದೊಯ್ಯಲು ಗುವ್ವಾ ಸಿದ್ಧಾರ್ಥ್ ಎಂಬ ರ‍್ಯಾಪಿಡೋ‌ ಬಾಯ್ ಲೊಕೆಷನ್​ಗೆ ಪೊಲೀಸ್ ಇಲಾಖೆಯ TS 09 PC 2795 ನಂಬರ್​ನ ಪೊಲೀಸ್ ಬೈಕ್ ತಂದಿದ್ದಾನೆ. ಇದನ್ನು ನೋಡಿದ ಪ್ರಯಾಣಿಕ ನೀವು ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ‌ ಮಾಡುತ್ತಿರಾ? ಎಂದು ಪ್ರಶ್ನಿಸಿದ್ದಾನೆ.

ಸ್ನೇಹಿತನಿಗೆ ಬೈಕ್ ಕೊಟ್ಟಿದ್ದ ಪೊಲೀಸ್ ಕಾನ್‌ಸ್ಟೆಬಲ್

ಪ್ರಯಾಣಿಕ ಮಾತಿಗೆ ಉತ್ತರ ನೀಡಿರುವ ರ‍್ಯಾಪಿಡೋ‌ ಬಾಯ್ ಈ ಬೈಕ್ ನನ್ನ ಪೊಲೀಸ್ ಕಾನ್‌ಸ್ಟೆಬಲ್ ಸ್ನೇಹಿತದ್ದು, ಆತ ಕೊಟ್ಟಿದ್ದಾನೆ ಅಂತ ಉತ್ತರಿಸಿದ್ದಾನೆ. ಇಬ್ಬರ ಸಂಭಾಷಣೆಯ ದೃಶ್ಯಗಳನ್ನು ಪ್ರಯಾಣಿಕ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

ಸರ್ಕಾರಿ ವಾಹನ ಖಾಸಗಿ ಸೇವೆಗೆ ಬಳಕೆ

ಇನ್ನೂ ಬೈಕ್ ಪೊಲೀಸ್ ಇಲಾಖೆಯ ಬ್ಲೂ ಕೋಲ್ಟ್ ಗಸ್ತು ವಾಹನವಾಗಿದ್ದು, ತುರ್ತು ಸೇವೆ ಮತ್ತು ಗಸ್ತು ಕೆಲಸಕ್ಕೆ ಮಾತ್ರ ಬಳಸುತ್ತಾರೆ. ದರೆ ಅದನ್ನು ಖಾಸಗಿ ರ‍್ಯಾಪಿಡೋ‌ ಸೇವೆಗೆ ಬಳಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಎನುಮಾಮುಲಾ ಸರ್ಕಲ್​ ಇನ್ಸಪೆಕ್ಟರ್ ​ ಜೆ.ಸುರೇಶ್​ಗೆ ಸೇರಿದ್ದು, ಸದ್ಯ ಅದನ್ನು ಎಸ್‌ಐ ಶಂಕರ್ ಬಳಸುತ್ತಿದ್ದರು ಎನ್ನಲಾಗಿದೆ.

ಎಸ್‌ಐ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಸರ್ಕಾರಿ ವಾಹನ ಖಾಸಗಿ ಸೇವೆಗೆ ಹೇಗೆ ಬಳಕೆಯಾಯಿತು ಎಂಬುದರ ಬಗ್ಗೆ ತನಿಖೆ ಮುಂದಾಗಿದೆ. ಮತ್ತು ಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಾರಂಗಲ್ ಪೊಲೀಸ್ ಆಯುಕ್ತರಿಗೆ ಶಿಫಾರಸು ಮಾಡಿದೆ (ಏಜೆನ್ಸೀಸ್​).