Ayesha Khan  
ದೇಶ

ಪ್ರತಿದಿನ ಅತ್ಯಾಚಾರದ ಬೆದರಿಕೆ: ಇನ್‌ಸ್ಟಾಗ್ರಾಮ್‌ ವಿಕೃತಿ ಬಗ್ಗೆ ನಟಿ ಆಯೇಷಾ ಖಾನ್ ಆತಂಕಕಾರಿ ಹೇಳಿಕೆ! | Ayesha Khan

ಮುಂಬೈ: ಗ್ಲಾಮರ್ ಪ್ರಪಂಚದ ಮಿಂಚಿನ ಹಿಂದೆ ಅದೆಷ್ಟು ಕರಾಳತೆ ಅಡಗಿದೆ ಎಂಬುದನ್ನು ಹಿಂದಿ ಬಿಗ್ ಬಾಸ್ ಖ್ಯಾತಿಯ ನಟಿ ಆಯೇಷಾ ಖಾನ್(Ayesha Khan ) ಬಹಿರಂಗಪಡಿಸಿದ್ದಾರೆ. ಕೇವಲ 'ದಪ್ಪಗಿದ್ದಾರೆ' ಎಂಬ ಕಾರಣಕ್ಕೆ ಹಾಡಿನಿಂದ ಹೊರಹಾಕಲ್ಪಟ್ಟ ಘಟನೆಯಿಂದ ಹಿಡಿದು, ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಅತ್ಯಾಚಾರ ಬೆದರಿಕೆಗಳವರೆಗೆ ಆಯೇಷಾ ಹಂಚಿಕೊಂಡಿರುವ ವಿಷಯಗಳು ಈಗ ಸಂಚಲನ ಮೂಡಿಸಿವೆ.
'ವೀ ದಿ ವುಮೆನ್' (We The Women) ಕಾರ್ಯಕ್ರಮದಲ್ಲಿ ಮಾತನಾಡಿದ ಆಯೇಷಾ, ತಾವು 12ನೇ ತರಗತಿಯಲ್ಲಿದ್ದಾಗ ನಡೆದ ನೋವಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಟಿ-ಸೀರೀಸ್‌ನ ದೊಡ್ಡ ಮ್ಯೂಸಿಕ್ ವಿಡಿಯೋವೊಂದರಲ್ಲಿ ಅವರು ಎರಡನೇ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಚಿತ್ರೀಕರಣಕ್ಕೆ ಕೇವಲ ಒಂದು ರಾತ್ರಿ ಬಾಕಿ ಇರುವಾಗ, "ನೀನು ದಪ್ಪಗಿದ್ದೀಯಾ, ನಮ್ಮ ಹಾಡಿಗೆ ಸರಿಹೊಂದುವುದಿಲ್ಲ" ಎಂದು ಹೇಳಿ ಅವರನ್ನು ಯೋಜನೆಯಿಂದ ಕೈಬಿಡಲಾಗಿತ್ತು. ಈ ಘಟನೆಯು ಅವರ ಆತ್ಮವಿಶ್ವಾಸದ ಮೇಲೆ ದೊಡ್ಡ ಹೊಡೆತ ನೀಡಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈಂಗಿಕ ಕಿರುಕುಳ ಮತ್ತು ಬೆದರಿಕೆ

ಆಯೇಷಾ ಕೇವಲ ಬಾಡಿ ಶೇಮಿಂಗ್‌ಗೆ ಮಾತ್ರವಲ್ಲದೆ, ಇಂಟರ್ನೆಟ್ ಲೋಕದ ವಿಕೃತ ಮನಸ್ಥಿತಿಗೂ ಬಲಿಯಾಗುತ್ತಿದ್ದಾರೆ. "ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಏನೇ ಪೋಸ್ಟ್ ಮಾಡಿದರೂ ಜನರು ನನ್ನ ದೇಹದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಒಂದು ಸಾಧಾರಣ ಟಾಪ್ ಅಥವಾ ಸ್ಕರ್ಟ್ ಧರಿಸಿದರೂ ನನ್ನನ್ನು ಲೈಂಗಿಕವಾಗಿ ಬಿಂಬಿಸಲಾಗುತ್ತದೆ. ಪ್ರತಿ ದಿನವೂ ನನಗೆ ಅತ್ಯಾಚಾರದ ಬೆದರಿಕೆಗಳು (Rape Threats) ಬರುತ್ತವೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
"ಇವು ಕೇವಲ ಕಾಮೆಂಟ್‌ಗಳಲ್ಲ, ಇವುಗಳ ಹಿಂದೆ ಇರುವವರು ನಿಜವಾದ ಮನುಷ್ಯರು ಎಂಬುದು ನೆನಪಾದಾಗ ಭಯವಾಗುತ್ತದೆ. ನಾನು ಇಂದು ಪ್ರಸಿದ್ಧಿಯಾಗದೇ ಇರುತ್ತಿದ್ದರೆ, ಇವರು ಕಾಮೆಂಟ್‌ನಲ್ಲಿ ಹೇಳಿದ್ದನ್ನು ನಿಜವಾಗಿಯೂ ಮಾಡಿಬಿಡುತ್ತಿದ್ದರು ಅನಿಸುತ್ತದೆ." ಎಂದಿದ್ದಾರೆ.

ಆಯೇಷಾ ಖಾನ್ ವೃತ್ತಿಜೀವನದ ಪಯಣ

ಜೂನಿಯರ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ ಆಯೇಷಾ ಏಕ್ತಾ ಕಪೂರ್ ಅವರ 'ಕಸೌತಿ ಜಿಂದಗಿ ಕೆ' ಮೂಲಕ ಪದಾರ್ಪಣೆ, ನಂತರ 'ಬಾಲ್ವೀರ್ ರಿಟರ್ನ್ಸ್'ನಲ್ಲಿ ನಟನೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 17 ಈ ಶೋ ಮೂಲಕ ಆಯೇಷಾ ಮನೆಮಾತಾದರು. ಇನ್ನು ತೆಲುಗಿನ 'ಮುಖಚಿತ್ರಂ' ಮೂಲಕ ಚಿತ್ರರಂಗಕ್ಕೆ ಪ್ರವೇಶ. ಇತ್ತೀಚೆಗೆ ಆದಿತ್ಯ ಧರ್ ಅವರ 'ಧುರಂಧರ್' ಚಿತ್ರದ 'ಶರಾರತ್' ಹಾಡಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಪಿಲ್ ಶರ್ಮಾ ಅಭಿನಯದ 'ಕಿಸ್ ಕಿಸ್ಕೋ ಪ್ಯಾರ್ ಕರೂನ್ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಆಯೇಷಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಕಠಿಣ ಕಾನೂನಿನ ಅಗತ್ಯ!

ಸೈಬರ್ ಬುಲ್ಲಿಂಗ್ ಮತ್ತು ಮಹಿಳೆಯರ ಮೇಲಿನ ಆನ್‌ಲೈನ್ ದೌರ್ಜನ್ಯದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಪ್ರತಿಯೊಂದು ಪೋಸ್ಟ್ ಹಾಕುವ ಮುನ್ನ ಸಾವಿರ ಬಾರಿ ಯೋಚಿಸಬೇಕಾದ ಪರಿಸ್ಥಿತಿ ಮಹಿಳಾ ಕಲಾವಿದರಿಗಿದೆ ಎಂಬುದು ವಿಷಾದನೀಯ ಎಂದು ಅವರು ಹೇಳಿದ್ದಾರೆ,(ಏಜೆನ್ಸೀಸ್).