- ಬಾಂಗ್ಲಾದೇಶದಲ್ಲಿ ಹಿಂದೂ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ
- ಇಂತಹ ಹಿಂಸಾಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದ ಶಿಖರ್ ಧವನ್
- ಬಾಂಗ್ಲಾದೇಶದಲ್ಲಿ ನಿಲ್ಲದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ವಿಧವೆಯ ಮೇಲೆ ನಡೆದ ಹಲ್ಲೆಯನ್ನು ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಖಂಡಿಸಿದ್ದು, ಯಾರ ವಿರುದ್ಧವೂ, ಎಲ್ಲಿಯಾದರೂ ಇಂತಹ ಹಿಂಸಾಚಾರ ಒಪ್ಪಿಕೊಳ್ಳುವಂತದಲ್ಲ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಾಲಿಗಂಜ್‌ನಲ್ಲಿ 40 ವರ್ಷದ ಹಿಂದೂ ಮಹಿಳೆಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿ, ಮರಕ್ಕೆ ಕಟ್ಟಿ ಹಾಕಿ ಕೂದಲು ಕತ್ತರಿಸಲಾಗಿದ ಘಟನೆ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ವಿಧವೆಯ ಮೇಲಿನ ಕ್ರೂರ ಹಲ್ಲೆಯ ಬಗ್ಗೆ ಓದಲು ಹೃದಯ ವಿದ್ರಾವಕವಾಗಿದೆ. ಯಾರ ವಿರುದ್ಧವೂ, ಎಲ್ಲಿಯಾದರೂ ಇಂತಹ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಬದುಕುಳಿದವರಿಗೆ ನ್ಯಾಯ ಮತ್ತು ಬೆಂಬಲಕ್ಕಾಗಿ ಪ್ರಾರ್ಥನೆಗಳು ಎಂದು ಧವನ್ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮಹಿಳೆ ಸಲ್ಲಿಸಿದ ಪೊಲೀಸ್ ದೂರಿನ ಪ್ರಕಾರ, ಸುಮಾರು ಎರಡೂವರೆ ವರ್ಷಗಳ ಹಿಂದೆ ಕಾಳಿಗಂಜ್ ಪುರಸಭೆಯ ವಾರ್ಡ್ ಸಂಖ್ಯೆ 7 ರಲ್ಲಿ ಶಾಹಿನ್ ಮತ್ತು ಅವರ ಸಹೋದರನಿಂದ 2 ಮಿಲಿಯನ್ ಟಾಕಾಗೆ ಎರಡು ಅಂತಸ್ತಿನ ಮನೆಯೊಂದಿಗೆ ಮೂರು ದಶಮಾಂಶ ಭೂಮಿಯನ್ನು ಖರೀದಿಸಿದ್ದಾಗಿ ಅವರು ಹೇಳಿದ್ದಾರೆ.
ನಂತರ ಶಾಹಿನ್ ಅಸಭ್ಯ ಪ್ರಸ್ತಾಪಗಳನ್ನು ಮಾಡಲು ಮತ್ತು ಆಕೆ ಅವನನ್ನು ತಿರಸ್ಕರಿಸಿದ ನಂತರ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಆಕೆ ಆರೋಪಿಸಿದ್ದಾರೆ.
ಶನಿವಾರ(ಜ.3) ಸಂಜೆ ಅವರ ಗ್ರಾಮದ ಇಬ್ಬರು ಸಂಬಂಧಿಕರು ಭೇಟಿ ನೀಡುತ್ತಿದ್ದಾಗ, ಶಾಹಿನ್ ಮತ್ತು ಅವರ ಸಹಚರ ಹಸನ್ ಮನೆಗೆ ಬಲವಂತವಾಗಿ ನುಗ್ಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಆರೋಪಿಗಳು 50,000 ಟಾಕಾ (ಸುಮಾರು 37,000 ರೂ.) ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಆಕೆ ಹಣ ನೀಡಲು ನಿರಾಕರಿಸಿದಾಗ, ಅವರು ತಮ್ಮ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಅವರನ್ನು ಓಡಿಸಿದ್ದಾರೆ ಎಂದು ಹೇಳಲಾಗಿದೆ. ಸಹಾಯಕ್ಕಾಗಿ ಕಿರುಚಿದಾಗ, ಪುರುಷರು ಅವಳನ್ನು ಮರಕ್ಕೆ ಕಟ್ಟಿ, ಕೂದಲು ಕತ್ತರಿಸಿ, ಕೃತ್ಯವನ್ನು ಚಿತ್ರೀಕರಿಸಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಿಲ್ಲದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ
ಬಾಂಗ್ಲಾದೇಶದಲ್ಲಿ ಕಳ್ಳತನದ ಶಂಕೆಯ ಮೇಲೆ ಬೆನ್ನಟ್ಟುತ್ತಿದ್ದ ಗುಂಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಬುಧವಾರ(ಜ.7) ತಿಳಿಸಿದ್ದಾರೆ. ನೌಗಾಂವ್ ಜಿಲ್ಲೆಯ ಮಹಾದೇಬ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಮುಖ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಅಶಾಂತಿ ಉಂಟಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳಲ್ಲಿ ಇದು ಇತ್ತೀಚಿನ ಘಟನೆಯಾಗಿದೆ.
ನರಸಿಂಗ್ಡಿ ನಗರದಲ್ಲಿ 40 ವರ್ಷದ ಹಿಂದೂ ದಿನಸಿ ಅಂಗಡಿ ಮಾಲೀಕರ ಹತ್ಯೆಯ ನಂತರ ಇತ್ತೀಚಿನ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಶರತ್ ಮಣಿ ಚಕ್ರವರ್ತಿ ಎಂಬ ಹಿಂದೂ ವ್ಯಕ್ತಿಯನ್ನು ಕೊಲ್ಲಲಾಯಿತು. ಸೋಮವಾರ(ಜ.5) ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಮಣಿ ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ,(ಏಜನ್ಸೀಸ್).