ಬೆಂಗಳೂರು: ದೈವಾರಾಧನೆಗೆ ಅಪಚಾರ ಎಸಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕ್ಷಮೆ ಕೇಳಲು ರಣವೀರ್ ಸಿಂಗ್ ಸಿದ್ಧರಿದ್ದಾರೆ. ಆ ಕುರಿತು ಅಫಿಡವಿತ್ ಸಲ್ಲಿಸಲಾಗುವುದು. ಅಲ್ಲದೆ, ದೇವಾಲಯಕ್ಕೂ ಭೇಟಿ ನೀಡಲಾಗುವುದು ಎಂದು ರಣವೀರ್ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಗೋವಾದಲ್ಲಿ ನವೆಂಬರ್ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಾರಾಧನೆಗೆ ಅವಮಾನವಾಗುವ ರೀತಿ ವರ್ತಿಸಿದ್ದಾರೆ ಎಂದು ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎ್ಐಆರ್ ರದ್ದುಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರಕರಣದ ದೂರುದಾರರ ಪರ ವಾದಿಸಿದ ವಕೀಲರು, ರಣವೀರ್ ಸಿಂಗ್ ಸಾಮಾಜಿಕ ಜಾಲಾತಾಣದಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ, ಅದನ್ನು ಅವರು ಮನಪೂರ್ವಕವಾಗಿ ಮಾಡಿಲ್ಲ. ಅವರ ಸೋಷಿಯಲ್ ಮೀಡಿಯಾ ಮ್ಯಾನೇಜರ್ಗಳು ಟ್ವೀಟ್ ಮಾಡಿರುತ್ತಾರೆ. ಅವರು ಮೌಖಿಕವಾಗಿ ದೈವಕ್ಕೆ ಅಪಚಾರ ಮಾಡಿರುವುದರಿಂದ ಮೌಖಿಕವಾಗಿಯೇ ಕ್ಷಮೆ ಕೇಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ಷಮೆ ಕೇಳಿ ಅಫಿಡವಿತ್ ಸಲ್ಲಿಸುವುದಾಗಿ ರಣವೀರ್ ಹೇಳಿದ್ದಾರೆ. ನೀವು ಇನ್ನೇನು ಬಯಸುತ್ತಿದ್ದೀರಾ? ಪ್ರಮಾದವಾಗಿದೆ ಹೌದು. ರಣವೀರ್ ಮಾಡಿರುವುದನ್ನು ಬೆಂಬಲಿಸಲು ಸಾಧ್ಯವಿಲ್ಲ. ಅವರೀಗ ಕ್ಷಮೆ ಕೇಳಲು ಸಿದ್ಧರಿದ್ದಾರೆ. ದೇವಾಲಯಕ್ಕೆ ಬಂದು ಕ್ಷಮೆ ಕೇಳುತ್ತಾರೆ. ಪಶ್ಚಾತಾಪ ಪಡುವ ಮನಸ್ಸಿರಬೇಕು ಎಂದು ಹೇಳಿತು.
ರಣವೀರ್ ಭೇಟಿಯ ದಿನಾಂಕದ ಬಗ್ಗೆ ನಿರ್ಧರಿಸಲಾಗುವುದು. ಕ್ಷಮೆ ಕೋರಿ ಅಫಿಡವಿತ್ ಸಲ್ಲಿಸಲಾಗುವುದು ಎಂಬ ಅವರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಏ. 10ಕ್ಕೆ ಮುಂದೂಡಿತು.