ನಾಗಪುರ: ಬಾಲಿವುಡ್‌ನ 'ಎನರ್ಜಿಟಿಕ್' ಸ್ಟಾರ್, 'ಧುರಂಧರ್ 2' ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತಿರುವ ರಣವೀರ್ ಸಿಂಗ್ ಅವರು ದಿಢೀರನೆ ನಾಗಪುರಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಶುಕ್ರವಾರ ನಾಗಪುರಕ್ಕೆ ತೆರಳಿದ ನಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಚೇರಿಗೆ ಭೇಟಿ ನೀಡಿ ಸರ್ಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗೌಪ್ಯವಾಗಿ ನಡೆದ 90 ನಿಮಿಷಗಳ ಭೇಟಿ!
ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಅವರ ಜನ್ಮದಿನದ ಸಂಭ್ರಮದಲ್ಲಿದ್ದ ರಣವೀರ್ ಸಿಂಗ್, ಅಲ್ಲಿಂದ ನೇರವಾಗಿ ನಾಗಪುರಕ್ಕೆ ಹಾರಿದ್ದಾರೆ. ಮೂಲಗಳ ಪ್ರಕಾರ, ರಣವೀರ್ ಅವರ ಈ ಭೇಟಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. ಸಂಜೆ 4 ಗಂಟೆಗೆ ನಾಗಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟ, ಅಲ್ಲಿಂದ ನೇರವಾಗಿ ಮಹಲ್ ಪ್ರದೇಶದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ತೆರಳಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ರಣವೀರ್ ಮತ್ತು ಮೋಹನ್ ಭಾಗವತ್ ಅವರು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಚಿತ್ರದ ಬಗ್ಗೆ ಚರ್ಚೆ, ಸಂಘದ ಬಗ್ಗೆ ಕುತೂಹಲ
ಈ ಭೇಟಿಯ ವೇಳೆ ರಣವೀರ್ ಸಿಂಗ್ ಅವರು ತಮ್ಮ ಸೂಪರ್ ಹಿಟ್ ಸಿನಿಮಾ 'ಧುರಂಧರ್ 2' ಕುರಿತು ಮಾಹಿತಿಯನ್ನು ಭಾಗವತ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಆರ್‌ಎಸ್‌ಎಸ್‌ನ ಸಾಂಘಿಕ ರಚನೆ ಹಾಗೂ ಸಂಘವು ನಡೆಸುತ್ತಿರುವ ಸಮಾಜ ಸೇವಾ ಕಾರ್ಯಗಳ ಬಗ್ಗೆಯೂ ರಣವೀರ್ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ಸ್ಮೃತಿ ಮಂದಿರಕ್ಕೆ ಭೇಟಿ - ಶ್ರದ್ಧಾಂಜಲಿ
ಪ್ರಧಾನ ಕಚೇರಿಯ ಭೇಟಿಯ ನಂತರ ರಣವೀರ್ ಸಿಂಗ್ ಅವರು ರೇಷ್ಮಿಬಾಗ್‌ನಲ್ಲಿರುವ ಡಾ. ಹೆಡ್ಗೆವಾರ್ ಸ್ಮೃತಿ ಮಂದಿರ ಸಂಕೀರ್ಣಕ್ಕೆ ಭೇಟಿ ನೀಡಿದರು. ಸಂಘದ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಮತ್ತು ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವರಾವ್ ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ರಾತ್ರಿ 8:15ರ ಸುಮಾರಿಗೆ ಅವರು ನಾಗಪುರದಿಂದ ಮುಂಬೈಗೆ ವಾಪಸ್ಸಾಗಿದ್ದಾರೆ.
1000 ಕೋಟಿ ಕ್ಲಬ್‌ನಲ್ಲಿ 'ಧುರಂಧರ್ 2'
ರಣವೀರ್ ಸಿಂಗ್ ಸದ್ಯ ತಮ್ಮ ವೃತ್ತಿಜೀವನದ ಅತ್ಯಂತ ಯಶಸ್ವಿ ಹಂತದಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಧುರಂಧರ್ 2' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1000 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಸಂಭ್ರಮದ ನಡುವೆಯೇ ರಣವೀರ್ ಅವರ ಆರ್‌ಎಸ್‌ಎಸ್ ಕಚೇರಿ ಭೇಟಿ ಈಗ ಬಾಲಿವುಡ್ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ(ಏಜೆನ್ಸೀಸ್),